ಬಹಳ ದಿನಗಳಿಂದ ನನಗನ್ನಿಸುತ್ತಿರುವ ಅಭಿಪ್ರಾಯವಿದು. ಅಮೂರ್ತ ಕಲೆಗಳ ವಿಮರ್ಶೆ ಬಗ್ಗೆ. ಒಟ್ಟೂ ಇಲ್ಲಿನ ಪ್ರಯತ್ನದ ಅರ್ಥಪೂರ್ಣತೆ ಎಲ್ಲಿ ಸಾಕಾರಗೊಳ್ಳಬಲ್ಲದು ಎಂಬುದೇ ನಿಗೂಢ.
ಸಂಗೀತದ ವಿಷಯವನ್ನೇ ತೆಗೆದುಕೊಳ್ಳೋಣ. ಇಂದು ಸದಾ ವಿಮರ್ಶೆ ಹಾಗೂ ವಿಮರ್ಶಕರ ಅಡ್ಡಕತ್ತರಿಗೆ ಸಿಲುಕಿ ನಲುಗುತ್ತಿರುವ ಕಲೆಯ ಮುಖ್ಯ ಕ್ಷೇತ್ರವೆಂದರೆ ಸಂಗೀತ ಹಾಗೂ ನೃತ್ಯ. ನಂತರ ಚಿತ್ರಕಲೆಯದ್ದು.
ವಿಮರ್ಶಕರೆಲ್ಲಾ ಚಾಟಿ ಹಿಡಿದು ನಿಂತುಬಿಟ್ಟಿದ್ದಾರೆ. ಮಾತೆತ್ತಿದರೆ ಅದನ್ನು ಬೀಸುವುದೇ. ಅದಕ್ಕಾಗಿ ಕಲಾವಿದ ವರ್ಗದಲ್ಲೂ ಕೆಲಪಾಲು ವಿಮರ್ಶಕರನ್ನು ಓಲೈಸುವ ನೆಲೆಗೂ ತಲುಪಿರುವುದು ಸುಳ್ಳಲ್ಲ. ಕೆಲ ವಿಮರ್ಶಕರು ಅದನ್ನೇ ಗುತ್ತಿಗೆ ಹಿಡಿದಿದ್ದಾರೆ. ಸಾರ್ವಭೌಮರಾಗಿ ಮೆರೆಯುವ ದಿಸೆಯಲ್ಲಿ ವಿಮರ್ಶಕರ ಪ್ರಯತ್ನ ಮೇರೆ ಮೀರುತ್ತಿದ್ದರೆ, ಕಲಾವಿದರು ಸೋಲುತ್ತಿದ್ದಾರೆ. ವಿಮರ್ಶಕರನ್ನು ಓಲೈಸುವುದು ಅಥವಾ ವಿಮರ್ಶಕರನ್ನು ನಿರ್ಲಕ್ಷ್ಯಿಸಿ ಸಂಗೀತ ಸಭಾಗಳಿಂದ ಅವಗಣನೆಗೆ ಗುರಿಯಾಗುವುದು-ಎರಡೇ ಹಾದಿ ಕಲಾವಿದರಿಗೆ.
ಮೂಲಭೂತ ಪ್ರಶ್ನೆಯೆಂದರೆ ಒಂದು ಅಮೂರ್ತ ಕಲೆಯನ್ನು ವಿಮರ್ಶೆ ಯಾವ ದಿಸೆಯಲ್ಲಿ ಸೆರೆ ಹಿಡಿಯಬಲ್ಲದು ಎಂಬುದು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ರಾಗದ ಆಲಾಪನೆಯನ್ನೋ, ಚೀಜ್‌ನ್ನು ಪ್ರಸ್ತುತ ಪಡಿಸುವ ಮಾದರಿಯನ್ನೋ ವಿಮರ್ಶೆ ಹಿಡಿದುಕೊಡಲಾರದು. ಇದೇ ಮಾತು ಎಲ್ಲದಕ್ಕೂ ಅನ್ವಯ. ಒಂದು ವರ್ಣದ ನಿರೂಪಣೆಯನ್ನು ಪದಗಳಲ್ಲಿ ತುಂಬಿಕೊಡಲು ಸಾಧ್ಯವೇ? ಸಮುದ್ರವನ್ನು ಒಂದು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ಸಾಂಕೇತಿಕವೆನಿಸಬಲ್ಲದು. ಆದರೆ ಒಂದು ಸಂಗೀತದ ಕಛೇರಿಯ ಸೊಬಗನ್ನು ಹೀಗೆ ಸಾಂಕೇತಿಸಲು ಹೊರಡುವುದು ಸಾಧುವಲ್ಲ ಎಂಬುದು ನನ್ನ ಅಭಿಪ್ರಾಯ.
ಒಂದು ಕಛೇರಿಯಲ್ಲಿ ಹಾಡಿದ ಕೀರ್ತನೆಗಳ ವಿವರವನ್ನೋ, ರಾಗದ ವಿವರಣೆಯನ್ನೋ ನೀಡುವುದು ಹಾಗಾದರೆ ವಿಮರ್ಶೆಯೇ? ಅಲ್ಲ. ವಿಶ್ಲೇಷಣೆಯನ್ನೇ ವಿಮರ್ಶೆ ಎನ್ನಬಹುದೇ? ಎಂದರೂ ಆ ನಿಲುವೂ ತಪ್ಪೇ. ವಿಶ್ಲೇಷಣೆಯಲ್ಲಿ ತೀರ್ಮಾನವಿರುವುದಿಲ್ಲ ; ಒಂದು ಆರೋಗ್ಯಕರ ಸಂವಾದ ಸಾಧ್ಯವಿರುತ್ತದೆ. ಅಲ್ಲಿಗೆ ವಿಮರ್ಶೆ ಏನನ್ನು ಮಾಡಬೇಕು?
ನನಗೆ ಅನ್ನಿಸುವುದು ಹೀಗೆ. ವಿಮರ್ಶೆ ಪ್ರಶಂಸೆ ಮಾದರಿಗೆ ಒಗ್ಗಿಕೊಳ್ಳಬೇಕು. ಇಲ್ಲಿ ಪ್ರಶಂಸೆಯ ಅರ್ಥ ವ್ಯಕ್ತಿ ಪ್ರಶಂಸೆಯಾಗಲೀ, ಸಂಸ್ಥೆ ಪ್ರಶಂಸೆಯಾಗಲೀ, ಕಲೆಯ ಪ್ರಶಂಸೆಯಾಗಲೀ ಅಲ್ಲ. ಇಲ್ಲಿ ಆಗಬೇಕಾದದ್ದು ನಿಜವಾಗಿಯೂ ಆರ್ಟ್ ಅಪ್ರಿಷಿಯೇಷನ್. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿ ಅಪ್ರಿಷಿಯೇಷನ್ ಎಂದರೆ ಅಭಿವೃದ್ಧಿ ಎನ್ನುವ ಅರ್ಥವೂ ಇದೆ.
ಅಮೂರ್ತ ಕಲೆಗಳ ಸಂದರ್ಭದಲ್ಲೂ ಈ ಅಭಿವೃದ್ಧಿಯಾಗಬೇಕು. ಕಲೆಯ, ಕಲಾವಿದನ ಹಾಗೂ ಸಂಗೀತ ಕಛೇರಿಯ ಸೊಬಗಿನ ಅಭಿವೃದ್ಧಿಯಾಗಬೇಕು. ಈ ದಿಸೆಯಲ್ಲಿ ವಿಮರ್ಶಕರು ತಮ್ಮ ತಜ್ಞತೆಯನ್ನು ಮೆರೆಯಬೇಕು.
ಒಂದು ಸಂಗೀತ ಕಛೇರಿಯ ಪರಿಪೂರ್ಣತೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಸಾಧ್ಯವಾಗಿಸುವ ನೆಲೆಯಲ್ಲಿ ವಿಮರ್ಶಕರು ಕ್ರಿಯಾಶೀಲರಾಗಬೇಕು. ಹಾಗೆಯೇ ರಸಾನುಭೂತಿಗೆ ಸಾಧ್ಯವಾಗುವ ಲಕ್ಷಣಗಳನ್ನು ಕಲಾವಿದರಿಗೆ ಮನದಟ್ಟು ಮಾಡುವ ಕಾರ್ಯವೂ ನಡೆಯಬೇಕು. ಮೂರು ಗಂಟೆಯ ಕಛೇರಿಯ ಒಟ್ಟು ಅನುಭೂತಿಗೆ ಪೂರಕ ಅಂಶಗಳನ್ನು ಒದಗಿಸುವ ಕೆಲಸವೂ ವಿಮರ್ಶಕನ ನೆಲೆಯಿಂದಲೇ ಹೊರಡಬೇಕಾದದ್ದು.
ತಜ್ಞತೆ ಎಂದಿಗೂ ವಿರೋಧದ ನೆಲೆಯಿಂದ ಹುಟ್ಟುವುದಿಲ್ಲ ; ಬದಲಿಗೆ ಸ್ವೀಕಾರ್ಹ ನೆಲೆಯಿಂದ ಹುಟ್ಟುತ್ತದೆ. ಪ್ರಯೋಗಶೀಲತೆ ಇಲ್ಲದೇ ಪರಂಪರೆ ಬೆಳೆಯಲಾರದು ಎಂಬುದು ಸ್ಪಷ್ಟ. ಕಲಾವಿದನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುವುದಲ್ಲದೇ, ಒಂದು ಪರಂಪರೆಯ ನಿರಂತರ ಪ್ರವಹಿಸುವಿಕೆಗೆ ಅರ್ಥಪೂರ್ಣ ಸಹಕಾರ ನೀಡಬಲ್ಲದು ಈ ತಜ್ಞತೆ. ಪ್ರತಿ ಹೊತ್ತಿನ ಪ್ರಯೋಗಶೀಲತೆಯನ್ನೂ ಸೂಕ್ಷವಾಗಿ ಗುರುತಿಸುತ್ತಲೇ ಅದರಿಂದಾಗಬಹುದಾದ ಗುಣಾವಗುಣಗಳನ್ನು ಲಕ್ಷಿಸಿ ನಿರ್ದಿಷ್ಟತೆ ರೂಪಿಸುವುದೂ ಈ ತಜ್ಞರ ಹೊಣೆ.
ಇಂತಹ ತಜ್ಞರಿಗೆ ಪ್ರಯೋಗಶೀಲತೆ ಯಾವುದೇ ದಿಕ್ಕಿನಿಂದ ಬಂದರೂ ಒಪ್ಪಿಕೊಳ್ಳುವ ಶುದ್ಧ ಮನಸ್ಥಿತಿ ಬೇಕು. ಹಿರಿಯನೋ, ಕಿರಿಯನೋ ಎಂಬ ಮಾತು ಬಿಟ್ಟು, ಪ್ರಯೋಗಕ್ಕೊಂದು ಪ್ರೇರಣೆ ನೀಡುವ ವಾತಾವರಣ ನಿರ್ಮಿಸುವ ಇಚ್ಛೆ ಇರಬೇಕು. ಜತೆಗೆ ಟೀಕೆಯನ್ನೂ ಸೂಕ್ಷ್ಮವಾದ ದನಿಯಲ್ಲಿ ಹೇಳುವ ಮುಖೇನ ಆದ ತಪ್ಪನ್ನು ಸರಿಪಡಿಸುವ ಪ್ರಯತ್ನಶೀಲತೆ ಬೇಕು. ಇದೆಲ್ಲಕ್ಕಿಂತ ಅವರ ಮುಖ್ಯ ಹೊಣೆ ಸೊಬಗನ್ನು ಹೆಚ್ಚಿಸುವ ಪರಿಯಾಗಿರಬೇಕು. ಪ್ರತಿಯೊಬ್ಬನನ್ನೂ ರಸಾನುಭೂತಿಯ ಕಡೆಗೆ ನಡೆಸುವ ಕಾರ್ಯದಲ್ಲಿ ವಿಮರ್ಶಕ ಮಹತ್ವದ ಪಾತ್ರ ವಹಿಸುತ್ತಾನೆ. ಇದು ಆಗಬೇಕಾದದ್ದೇ.
ಪ್ರತಿ ಸಂದರ್ಭದಲ್ಲೂ ಸಂಗೀತದ ಬಗ್ಗೆ ಮತ್ತೊಬ್ಬ ಅರಸಿಕನಲ್ಲಿ ಪ್ರೀತಿ ಹುಟ್ಟಿಸುತ್ತೇನೆ, ಕಲೆಯ ಬಗ್ಗೆ ಗಮನ ಹರಿಸಲು ಪ್ರಯತ್ನಿಸುತ್ತೇನೆ ಎಂಬ ಸೌಜನ್ಯ, ವಿನಯವೂ ವಿಮರ್ಶಕನಲ್ಲಿರಬೇಕು. ಅಷ್ಟು ಬಿಟ್ಟರೆ ಸಂಗೀತ, ಚಿತ್ರಕಲೆಯನ್ನು (ಅಮೂರ್ತ ಕಲಾ ಪ್ರಕಾರಗಳು) ಏನೂ ಮಾಡಲಿಕ್ಕಾಗದು.
ಸಾಹಿತ್ಯದ ವಿಷಯದಲ್ಲಿ ವಿಮರ್ಶೆಯ ಪಾತ್ರ ಬೇರೆಯಾದದ್ದು. ಸಾಹಿತ್ಯ ಕೃತಿಗೂ ವಿಮರ್ಶೆ ಯಾಕೆ ಬೇಕು? ಎಂಬ ಮಾತೂ ಇದೆ. ಹಾಗಾದರೆ ನೀವು ಯಾಕೆ ಕಾದಂಬರಿ, ಕಥೆ, ಕವಿತೆ ಬರೆಯುತ್ತೀರಿ? ಎನ್ನುವ ವಿಮರ್ಶಕರಿದ್ದಾರೆ. ಆದರೆ ಆ ಬಗ್ಗೆ ಇಲ್ಲಿ ಹೆಚ್ಚಿನ ಚರ್ಚೆ ಬೆಳೆಸುವುದಿಲ್ಲ. ನಮ್ಮ ಮೂಲ ಚರ್ಚೆಯ ನೆಲೆ ಕಲಾ ಪ್ರಕಾರಗಳ ಬಗ್ಗೆ.
ಶಾಸ್ತ್ರ ಇರುವುದು ಮೀರಲಿಕ್ಕೋ, ಆ ಮಿತಿಯೊಳಗೇ ಸುತ್ತಾಡಲಿಕ್ಕೋ ಎಂಬುದು ನಿಗದಿಯಾಗಬೇಕು. ಶಾಸ್ತ್ರವೇ ಒಂದು ಅಂಚುಪಟ್ಟಿಯಾಗಿ ಬಿಟ್ಟರೆ, ಪ್ರಯೋಗಶೀಲತೆಗೆ ಬೆದರುಬೊಂಬೆಯಾದರೆ ಪರಂಪರೆಯ ಪ್ರವಹಿಸುವಿಕೆಗೆ ಅಡ್ಡಿಯಾಗಬಲ್ಲದು. ಶಾಸ್ತ್ರ ಮೂಲಧಾತು. ಕಲಾವಿದನ ಪ್ರತಿ ಪ್ರಯತ್ನವೂ ಈ ನೆಲೆಯಿಂದಲೇ ಹೊರಟಿರಬೇಕು. ದಿಗಂತದೆತ್ತರ ದಲ್ಲಿ ಗಾಳಿಪಟ ಹಾರಿಸುವ ಹುಡುಗ ನಿಂತಿರುವುದು ನೆಲದ ಮೇಲೆ. ಅಲ್ಲಿಗೆ ನೆಲೆವೇ ನೆಲೆ. ಗಾಳಿಪಟ ಹಾರುವ ಪ್ರದೇಶ ಗಾಳಿಪಟದ ನೆಲೆಯೇ ಹೊರತು ಹುಡುಗನ್ನದಲ್ಲ. ಪ್ರಯೋಗಶೀಲತೆ ಗಾಳಿಪಟದ ಸಂಕೇತವಾಗಿರಿಸಿಕೊಂಡರೆ, ಕಲಾವಿದ ಇಲ್ಲಿ ಹುಡುಗ ಎಂದು ವ್ಯಾಖ್ಯಾನಿಸಿಕೊಳ್ಳಬಹುದು. ಶಾಸ್ತ್ರ ಇಂತಹ ಒಂದು ದಾರ ಅಥವಾ ನೆಲ. ಅದರ ಆಧಾರದ ಮೇಲೆ ಹಾರುವ ಗಾಳಿಪಟ ಪ್ರಯೋಗಶೀಲತೆ.
ಆದರಿಂದು ಇಂತಹ ಪ್ರಯೋಗಶೀಲತೆಯನ್ನು ಬೆಳೆಸುವ ವಿಮರ್ಶಕರ ಸಂಖ್ಯೆ ಕಡಿಮೆಯೇ. ಯದ್ವಾತದ್ವಾ ಹೊಗಳುವುದು ಅಥವಾ ಟೀಕಿಸುವುದಷ್ಟೇ ವಿಮರ್ಶೆಯ ಎನಿಸಿಬಿಟ್ಟರೆ ಕಲಾವಿದರು ಯಾವುದನ್ನು ಆರಿಸಿಕೊಳ್ಳಬೇಕು ? ಜನಪ್ರಿಯತೆ ನಮ್ಮಲ್ಲಿ ಸೃಜನಶೀಲತೆ ಬೆಳೆಸುತ್ತದೋ ಅಥವಾ ಪ್ರಬುದ್ಧತೆ, ನಿರಂತರ ಪ್ರಯತ್ನಶೀಲತೆಯೋ ಅಥವಾ ಇನ್ನೇನೋ ಎಂಬುದು ಇನ್ನೂ ನಮ್ಮ ವಿಮರ್ಶಕರಿಗೆ ಸ್ಪಷ್ಟವಾಗಿಲ್ಲ.
ಪ್ರಯೋಗ ಪ್ರತಿ ಜನಪ್ರಿಯ ಅಥವಾ ಪ್ರತಿಷ್ಠಿತ ಕಲಾವಿದನ ಸೊತ್ತು ಎಂಬಂತೆ ಪೇಟೆಂಟ್ ಕೊಡುವ ಮಾದರಿ ಉದ್ಭವಿಸುತ್ತಿದೆ. ಇಲ್ಲಿ ಹೊಸದೇನನ್ನೋ ಮಾಡಬೇಕೆಂದು ಹುಮ್ಮಸ್ಸಿನಿಂದ ಪುಟಿಯುವ ಮನಸ್ಸಿಗೆ ವಯಸ್ಸಾಗಿರಬೇಕು ಎಂದು ಆಶಿಸುವುದು ಎಷ್ಟರ ಮಟ್ಟಿಗೆ ಸರಿ ? ಸಂಪ್ರದಾಯದ ಹೆಸರಿನಲ್ಲಿ ಮೀರುವ ಪ್ರತಿ ಯತ್ನವನ್ನು ಕಟ್ಟಿ ಹಾಕುವುದು ಸರಿಯೇ ? ಹೋಗಲಿ, ವಿಮರ್ಶಕರು ಒಪ್ಪಿಕೊಂಡದ್ದನ್ನು ಮಾತ್ರ ಜನ ಒಪ್ಪಿಕೊಳ್ಳುತ್ತಾರೆಯೇ? ಇವೆಲ್ಲವೂ ಪ್ರಶ್ನೆಗಳು.
ಇತ್ತೀಚೆಗೆ ನಡೆದ ಒಂದು ಉದಾಹರಣೆ. ಕರ್ನಾಟಕ ಮೂಲದ ಅನಿವಾಸಿ ಕಲಾವಿದ ಬಂದು ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು. ಇನ್ನೂ ಯುವ ಕಲಾವಿದ. ಕಛೇರಿ ಚೆನ್ನಾಗಿಯೇ ಇತ್ತು. ಆರಿಸಿಕೊಂಡ ವರ್ಣ, ಅದರ ನಿರೂಪಣೆ, ಸಾಂಗತ್ಯ ಎಲ್ಲವೂ ಸೂಕ್ತವಾಗಿತ್ತು. ಟೀಕಿಸುವುದೇ ನಿಮ್ಮ ಉದ್ದೇಶವಾದಾಗ ಏನಾದರೂ ಹುಡುಕಲೇಬೇಕೆಂಬ ಮನೋಭಾವ ಕೆಲವು ವಿಮರ್ಶಕರದ್ದು. ಅಂದು ಕಾರ್ಯಕ್ರಮದಲ್ಲಿ ಹಾಜರಿದ್ದ ವಿಮರ್ಶಕರ ಬಳಿ ಕಲಾವಿದ ಕಛೇರಿ ಮುಗಿಸಿ ಬಂದಾಗ ” ಎಲ್ಲಾ ಸರಿ, ಆದರೂ ತಪ್ಪು’ ಎನ್ನುವ ಧಾಟಿಯಲ್ಲಿ ಮಾತನಾಡಿದರು. “ನಿನಗೆ ಅರೋಗೆನ್ಸ್ ಇದೆ. ಈಗಲೇ ಎಲ್ಲಾ ಕಲಿತಿದ್ದೇನೆ ಎಂಬ ಅಹಂಕಾರ ಇದೆಯಲ್ಲ’ ಎಂದು ಝಾಡಿಸಿದರೆ ಹೇಗಿರುತ್ತೆ? ಇದು ಕಲೆಯನ್ನು ಬೆಳೆಸುವ ಯಾವ ಮಾದರಿ? ಯಾವ ಪ್ರಶಂಸೆ ?
ಸಂಗೀತ ಕಛೇರಿಯ ವಿಮರ್ಶೆಯಲ್ಲಿ ಕಲಾವಿದ ಪ್ರಸ್ತುತಪಡಿಸಿದ ಕೃತಿಗಳ, ರಾಗಗಳ ಮಾಹಿತಿ ಬಿಟ್ಟರೆ ಬೇರೇನೂ ಇರುವುದಿಲ್ಲ. ಇಲ್ಲದಿದ್ದರೆ ಇಲ್ಲ ಸಲ್ಲದ ಉಪಮೆಗಳ ಅಲಂಕಾರ. ಪದಗಳಲ್ಲಿ ವರ್ಣಿಸಲಾಗದ ಅನುಭವವನ್ನು ಪದಗಳಲ್ಲಿ ಹೇಳಲಾರೆ ಎಂದು ಒಪ್ಪಿಕೊಳ್ಳುವ, ಹಾಗೆಯೇ ಕ್ರಿಯಾಶೀಲವಾಗುವ ಪ್ರಯತ್ನವೇ ಇಲ್ಲ. ವರ್ಣನೆ ಮಿತಿ ಮೀರುವ ನೆಲೆಯಲ್ಲೇ ವಿಮರ್ಶೆ ಎನ್ನಿಸಿಕೊಳ್ಳುವುದು ಅಂತ್ಯವಾಗುತ್ತದೆ. ಇಷ್ಟು ಬಿಟ್ಟರೆ, ಈ ಕೃತಿ ಸರಿಯಾಗಿ ನಿರೂಪಿಸಲಿಲ್ಲ, ನೆರವಲ್ ಸರಿ ಮಾಡಲಿಲ್ಲ, ಇಂತದ್ದು ಬಿಟ್ಟರೆ ಬೇರೇನು? ಇದನ್ನು ಹೊರತುಪಡಿಸಿದ ಗುಣಾತ್ಮಕ ಅಂಶಗಳೇನು? ಯೇಸುದಾಸ್ ಅವರ ಒಂದು ಕಛೇರಿಗಿಂತ ಈ ಕಛೇರಿಯ ಅಂಶವೇನು? ಹೊಸ ಪ್ರಯತ್ನ ಹೇಗಿರಬಹುದಿತ್ತು? ಎಂಬ ಸಲಹೆ ರೂಪದ ನೆಲೆ ಯಾಕೆ ಸಾಧ್ಯವಾಗದು?
ಒಬ್ಬ ಕ್ರಿಯಾಶೀಲ ಕಲಾವಿದನನ್ನು ಬೆಳೆಸುವವ ಮತ್ತು ಇಳಿಸುವ ಶಕ್ತಿ ನನ್ನಲ್ಲೇ ಅಡಗಿದೆ ಎಂದು ತಿಳಿದುಕೊಳ್ಳುವ ವಿಮರ್ಶಕನಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಾಗದು. ಪ್ರಚಾರದ ಅಬ್ಬರ ಅನಿವಾರ್ಯ ಎನಿಸಿರುವ ಹೊತ್ತಿನಲ್ಲಿ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಕಡೆಗಣಿಸಲಾಗದು. ಆದರೆ ಅಲ್ಲೂ ವಸ್ತುನಿಷ್ಠ ವಿಮರ್ಶೆ ಬರಬೇಕು, ಅದು ಕಲಾವಿದ, ಕಲೆಯ ಬೆಳವಣಿಗೆಗೆ ಪೂರಕವಾಗಿರಬೇಕು. ತಪ್ಪನ್ನು ಸರಿಪಡಿಸುವ ಹಾದಿಯಲ್ಲಿ.
ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಸುಲಭದ ಕೆಲಸ ದಾರಿ ರೂಪಿಸುವವನಿಗೆ ಹೋಲಿಸಿದರೆ. ಇಲ್ಲಿ ವಿಮರ್ಶಕ ದಾರಿ ರೂಪಿಸುವವನಾಗಬೇಕು. ಅವನೊಬ್ಬ ಮುಂಚೂಣಿಕಾರ. ಅಭಿರುಚಿ ನಿರ್ಮಾಣದ ಕಾರ್ಯದಲ್ಲಿ ಅವನೇ ಮೊದಲಿಗ. ಅವನ ಹಿಂದೆ ಮಿಕ್ಕವರೆಲ್ಲರೂ. ಆದರೆ ಈಗ ಬಹುಪಾಲು ವಿಮರ್ಶಕರು ಮಾರ್ಗದರ್ಶಕರಂತೆ ಠೀವಿ ಕೊಡುತ್ತಿರುವುದು ಪರಂಪರೆಯ ಪ್ರವಹಿಸುವಿಕೆಯ ವೇಗವನ್ನು ಕುಂಠಿತಗೊಳಿಸಬಲ್ಲದು.
ಸಂಕ ಎಂಬುದು ಗ್ರಾಮೀಣ ನುಡಿ. ಕರಾವಳಿ ಬದಿಯ ಗದ್ದೆಬೈಲಿನಲ್ಲಿರುವ ತೋಡನ್ನು ದಾಟಲು ನಿರ್ಮಿಸುವ ಸೇತುವೆ ಮಾದರಿಯದ್ದು. ಇದರ ಒಟ್ಟೂ ಕಾರ್ಯ ದಾರಿಹೋಕನನ್ನು ಮತ್ತೊಂದು ತುದಿಗೆ ದಾಟಿಸುವುದು ಅಥವಾ ದಾಟುವ ಪ್ರಕ್ರಿಯೆಯಲ್ಲಿ ಒಂದು ಪಾತ್ರ ವಹಿಸುವುದಷ್ಟೆ.
ಎರಡು ತೀರಗಳ ಅಥವಾ ಎರಡು ಬದಿಗಳ ನಡುವೆ ಸಂಬಂಧಸೇತುವಾಗಿ ಕಾರ್ಯ ನಿರ್ವಹಿಸುವ ಸಂಕದ ಪಾತ್ರವನ್ನೇ ವಿಮರ್ಶೆ ವಹಿಸಬೇಕೇ ? ಎಂಬುದು ಚರ್ಚೆಗೀಡಾಗಬೇಕು. ವಿಮರ್ಶೆ ಮತ್ತೊಂದು ತೀರವೆನ್ನುವ ಹಾಗೆ ಅಸ್ತಿತ್ವ ಕಲ್ಪಿಸಲು ಹೊರಟರೆ ಅದರದ್ದೇ ಬೇರೆ ಹಾದಿ. ಅಮೂರ್ತ ಕಲೆಗಳ ಅನುಭವದ ವಿಚಾರದಲ್ಲಿ ವಿಮರ್ಶೆ ಕೇವಲ ಸಂಕವಷ್ಟೇ. ಇದು ಲಘುವಾದ ಮಾತಲ್ಲ ; ಸಂಬಂಧ ಬೆಸೆಯುವ ಗುರುತರವಾದ ಹೊಣೆ. ಇದನ್ನು ವಿಮರ್ಶಕ ಹೊತ್ತರೆ ವಿಮರ್ಶೆಗೆ ಮತ್ತಷ್ಟು ಘನತೆ ಬಂದೀತಲ್ಲವೇ ? : ಬರಹ – ಗಂಧ, ಚಿತ್ರ- ಸುಗಂಧ
(ಜುಗಲ್ ಬಂದಿ ಚರ್ಚೆಯ ಅಂಕಣ. ನಾನು ಆರಂಭಿಸಿದ್ದೇನೆ. ದಯವಿಟ್ಟು ನೀವು ಮುಂದುವರೆಸಿ)
4 comments
Comments feed for this article
ಮಾರ್ಚ್ 31, 2008 at 11:07 ಫೂರ್ವಾಹ್ನ
chandrashekar
ವಿಮರ್ಶೆಯ ಅಗತ್ಯವಿಲ್ಲ ಎನಿಸುತ್ತೆ, ಕೆಲವೊಮ್ಮೆ. ಆದರೆ ವಿಮರ್ಶೆ ಮಾಡುವವರು ಕಲಾವಿದ ಮತ್ತು ಕೇಳುಗರ ನಡುವಿನ ಕೊಂಡಿಯಾದದ್ದರಿಂದ ಯಾಕಿರಬಾರದ್ದೂ ಎನಿಸುತ್ತೆ ಮತ್ತೊಮ್ಮೆ. ಆದರೆ ಯಾರೇ ಆಗಲೀ, ಹೊಸ ಪ್ರಯತ್ನಕ್ಕೆ ಹುರುಪು ತುಂಬುವವರು ಇರಬೇಕು. “ಇಗೊ’ ಅಡ್ಡ ಬಾರದಿದ್ದರೆ ಸಾಕು.
ಚಂದ್ರಶೇಖರ
ಏಪ್ರಿಲ್ 1, 2008 at 7:23 ಫೂರ್ವಾಹ್ನ
chetana chaitanya
ನಮಸ್ತೇ,
ಕೇದಗೆಬನಕ್ಕೆ ನಾವಡರು ದಾರಿ ತೋರಿಸಿದರು.
ನೀವು ಚರ್ಚೆಗೆಂದೇ ಅಂಕಣ ಹುಟ್ಟುಹಾಕಿರುವುದು ಖುಶಿ ಕೊಟ್ಟಿತು.
ಆದರೆ ನನಗೆ ಈ ಲಲಿತ ಕಲೆ- ವಿಮರ್ಶೆ ಇತ್ಯಾದಿ ಅಷ್ಟಾಗಿ ತಿಳಿಯುವುದಿಲ್ಲ. ಎಲ್ಲಿಯವರೆಗೆ ಗ್ರಹಿಕೆಗಳು ವಿಭಿನ್ನವಾಗಿರುತ್ತದೆಯೋ ಅಲ್ಲಿಯವರೆಗೆ ಪ್ರತಿಯೊಂದು ಸೃಜನಶೀಲ ಅಭಿವ್ಯಕ್ತಿಯೂ ವಿಮರ್ಶೆಗೆ ಒಳಪಟ್ಟೇ ಇರುತ್ತದೆ ಎಂದು ನನ್ನ ಅನಿಸಿಕೆ.
ವಂದೇ,
ಚೇತನಾ ತೀರ್ಥಹಳ್ಳಿ
ಏಪ್ರಿಲ್ 1, 2008 at 9:07 ಅಪರಾಹ್ನ
neelanjana
ಅರ್ಧಕ್ಕಿಂತ ಹೆಚ್ಚಿನ ವಿಮರ್ಶೆಗಳು ರಚನೆಗಳ ಪಟ್ಟಿಯೇ ಆಗಿರುತ್ತವೆ 😦 – ಅದಕ್ಕೆಂದೇ, ನಾನು ಎಂದಾದರೂ ಯಾವುದಾದರೂ ಸಂಗೀತ ಕಾರ್ಯಕ್ರಮದ ಬಗ್ಗೆ ಬರೆದಾಗ ’ಇದು ಪಟ್ಟಿ ಮಾತ್ರ’ ಎಂಬ ಡಿಸ್ಕ್ಲೈಮರ್ ಹಾಕಿಯೇ ತೀರುವೆ.
ಈ ವಿಮರ್ಶೆಗಳಿಗೆ ಒಂದು ಜವಾಬ್ದಾರಿ ಇದೆ – ಕೇಳುಗನಿಗೆ ಗೊತ್ತಿಲ್ಲದ ಕೆಲವು ಅಂಶಗಳನ್ನು ಎತ್ತಿತೋರಿಸುವ ಕೆಲಸವನ್ನು ಅವು ಮಾಡಬಲ್ಲವು. ಅದರಿಂದ ಒಳ್ಳೆ ಕೇಳುಗರನ್ನು ಬೆಳೆಸಬಲ್ಲವು.
ಆದರೆ ಹೆಚ್ಚಿನವು “ಆರಂಭದಲ್ಲಿ ಅಟ್ಟತಾಳದ ವಿರಿಬೋಣಿ ವರ್ಣ ಸೊಗಸಾಗಿ ಮೂಡಿತು. ನಂತರ ಬಿರುಸಿನ ’ಬ್ರೋವಬಾ ರಮಾ’ ( ತಮಾಷೆಯಲ್ಲ! – ಬೇಕಾಬಿಟ್ಟಿ ಸಾಹಿತ್ಯ ಎಲ್ಲಿ ಬೇಕೆಂದರಲ್ಲಿ ತುಂಡರಿಸುವ ಸಾಮರ್ಥ್ಯ ಇದೆ ಕೆಲವರಿಗ್) ; ಆದರ ನಂತರ ಸುಂದರವಾದ …… ” ಇಷ್ಟರಲ್ಲಿ ಕೊನೆಗೊಳ್ಳುತ್ತವೆ. ಇಷ್ಟು ಸಾಲದೆಂಬಂತೆ ರಾಗ/ತಾಳ/ವಾಗ್ಗೇಯಕಾರರ ಹೆಸರುಗಳಲ್ಲೂ ತಪ್ಪುಗಳು ಧಾರಾಳವಾಗಿ ರಾರಾಜಿಸುತ್ತಿರುತ್ತವೆ!
-ನೀಲಾಂಜನ
ಏಪ್ರಿಲ್ 4, 2008 at 10:14 ಫೂರ್ವಾಹ್ನ
kedagebana
ನಿಜ ಚಂದ್ರಶೇಕರ್,
ಇಗೊ ಅಡ್ಡ ಬಾರದಂತೆ ವಿಮರ್ಶೆ ನಡೆಯಬೇಕು. ಅದು ಸಾಧ್ಯವೇ ಅಂತ ಒಂದೊಂದು ಸಾರಿ ಅನಿಸುತ್ತೆ.
ಚೇತನಾರೇ.
ನಮ್ಮ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಅಭಿಪ್ರಾಯ ಒಪ್ಪಬಹುದಾದದ್ದೇ. ಆದರೆ ಎಲ್ಲ ಅಭಿವ್ಯಕ್ತಿಗಳೂ ವಿಮರ್ಶೆಗೆ ಒಳಪಡಲೇ ಬೇಕೆಂದಿಲ್ಲ ಅಥವಾ ಒಳಪಡಬೇಕೆಂಬ ಅನಿವಾರ್ಯತೆಯೂ ಇಲ್ಲವೆಂಬುದು ನನ್ನು ನಿಲುವು. ಎಲ್ಲಾ ಗ್ರಹಿಕೆಗಳೂ ಗ್ರಹಿಕೆಯ ನೆಲೆಯಲ್ಲೇ ಅರ್ಥ್ಯೆಸಿಕೊಳ್ಳಲಾಗದು. ಅದಕ್ಕೇ ನನ್ನ ಲೇಖನದಲ್ಲಿ ಸ್ಪಷ್ಟವಾಗಿ ವಿವರಿಸಿದ್ದೇನೆ. ಸಂಗೀತಗಾರನ ರಾಗ ಸೌಂದರ್ಯವನ್ನು ಪದಗಳಲ್ಲಿ ಹೇಳುವ ಪ್ರತಿಯೊಬ್ಬನೂ ಸೋಲುವುದು ನಿಜ. ಹಾಗಾಗಿ ಅನುಭವದ ನೆಲೆಯಿಂದಲೇ ಎಟುಕುವಂಥದ್ದಕ್ಕೆ ವಿಮರ್ಶೆ ಅಗತ್ಯವಿದೆಯೇ ಎಂಬುದೇ ನನ್ನ ಪ್ರಶ್ನೆ.
ನೀಲಾಂಜನ ಅವರೇ,
ನಿಮ್ಮ ಬ್ಲಾಗ್ ನೋಡಿದ್ದೇವೆ. ಚೆನ್ನಾಗಿದೆ. ನಿಮ್ಮದೂ, ಶ್ರೀ ಯವರ ಕೆಲವು ಡೆಡಿಕೇಟೆಡ್ ಬ್ಲಾಗ್ ಗಳನ್ನು ನೋಡಿ ನಾವೂ ಮಾಡೋಣ ಎಂದು ಶುರು ಮಾಡಿದ್ದೇವೆ. ಬೆಳೆಸಲು ನಿಮ್ಮಂಥವರ ಸಹಕಾರ ಅಗತ್ಯ.
ನೀವು ಹೇಳಿದಂತೆಯೇ ಇಂದಿನ ವಿಮರ್ಶೆ ಎಂದರೆ ಹಾಡಿದ ಕೀರ್ತನೆಗಳ ಪಟ್ಟಿ ಕೊಡೋದು, ಅಷ್ಟೇ. ತಪ್ಪುಗಳಂತೂ ಹೇರಳವಾಗಿರುತ್ತೆ. ಇಂಥ ವಿಮರ್ಶೆ ಅಗತ್ಯವಿದೆಯೇ?
ಸುಗಂಧ