You are currently browsing the monthly archive for ಜುಲೈ 2008.

ಯುರೋಪ್ ಖಂಡದಲ್ಲಿ ಕಲೆಯ ಇತಿಹಾಸದ ತಳ ನಮಗೆ ದಕ್ಕುವುದು  ಪ್ಯಾಲಿಯೋಲಿಥಿಕ್ ಕಾಲ (ಕ್ರಿ.ಪೂ ೨೫,೦೦೦) ವೆಂದು ಕರೆಯಲ್ಪಡುವ ಶಿಲಾಯುಗದ ಘಟ್ಟದಲ್ಲಿ. (ಕ್ರಿ.ಪೂ ೫೦,೦೦೦ ದಿಂದ ಕ್ರಿ.ಪೂ ೮೦೦೦ ದ ನಡುವಿನ ಕಾಲವನ್ನು ಶಿಲಾಯುಗದ ಪ್ಯಾಲಿಯೋಲಿಥಿಕ್ ಪ್ರಾರಂಭದ ಕಾಲ ಎಂದು ಗುರುತಿಸಲಾಗಿದೆ.) ಈ ಕಾಲದ ಜನರು ನಿರಂತರ ವಲಸೆಗಾರರಾಗಿದ್ದು ಅವರ ಈ ವರ್ತನೆಗೆ ಆಹಾರದ ಹಂಚಿಕೆಯಲ್ಲಿನ ಅಸಮತೆಯೇ ಕಾರಣವೆಂದು ತರ್ಕಿಸಲಾಗಿದೆ. ಗುಂಪು ಗುಂಪಾಗಿ ವಾಸಿಸುತ್ತಿದ್ದ ಇವರುಗಳು ಗುಹೆಗಳಲ್ಲಿ, ಚಿಕ್ಕ ಪುಟ್ಟ ಕಲ್ಲು, ಮರದ ಸಂದುಗಳಲ್ಲಿ, ಮಣ್ಣು-ಮರಗಳನ್ನು ಉಪಯೋಗಿಸಿ ನಿರ್ಮಿಸಿದ್ದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದುದಕ್ಕೆ ಆಧಾರಗಳಿವೆ.
ಈ ಕಾಲದಲ್ಲಿಯೇ ಕಲೆಯೆಂಬುದು ಹುಟ್ಟಿಕೊಂಡಿತೆನ್ನಲಾಗಿದೆ. ಈ ಕಾಲದ ಕಲಾವಿದರು ಕಲ್ಲು, ಮಣ್ಣು, ದಂತ, ಮೂಳೆಗಳಲ್ಲಿ ಪ್ರಾಣಿಗಳು, ಮನುಷ್ಯರ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು. ಈ ಶಿಲ್ಪಗಳು ಸಾಮಾನ್ಯವಾಗಿ ಪ್ರಾಕೃತಿಕವಾದ ವಸ್ತುಗಳ ರಚನೆಗೆ ಸಾಮ್ಯವೆನಿಸುವಂತೆ ಇರುತ್ತಿದ್ದವು ಮತ್ತು ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ (portable) ಒಯ್ಯುವ ಹಾಗಿರುತ್ತಿದ್ದವು. ಅಲ್ಲದೇ ಅಪಾರ ಕೌಶಲ್ಯಪೂರಿತವೂ ಆಗಿದ್ದವು.

 ಚಿತ್ರದಲ್ಲಿರುವ ಪ್ಯಾಲಿಯೋಲಿಥಿಕ್ ಕಾಲದ ಮಹಿಳೆಯ ಶಿಲ್ಪ ವಿಯೆನ್ನಾದ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿದೆ. ಇದಕ್ಕೆ Venus of Willendorf’  ಎಂದು ಹೆಸರಿಸಲಾಗಿದೆ. ಏಕೆಂದರೆ ಈ ಶಿಲ್ಪವು ಆಸ್ಟ್ರಿಯಾದ ವಿಲ್ಲೆಂಡಾರ್ಪ್ ಎಂಬ ಪ್ರದೇಶದಲ್ಲಿನ ಉತ್ಖತನದಲ್ಲಿ ದೊರೆತದ್ದಾಗಿದೆ. ಕ್ರಿ.ಪೂ ೨೫,೦೦೦ ದಿಂದ ಕ್ರಿ.ಪೂ ೨೧,೦೦೦ ದ ನಡುವಿನ ಶಿಲ್ಪ ಇದಿದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಶಿಲ್ಪ ೧೧.೫ ಸೆಂ. ಮೀ ಗಳಷ್ಟು ಎತ್ತರವಿದ್ದು ಆ ಕಾಲದ ಯಾವನೋ ಒಬ್ಬ ನುರಿತ ಶಿಲ್ಪಿಯಿಂದಲೇ ಇದು ತಯಾರಾಗಿರಬಹುದು. ಏಕೆಂದರೆ ಲೈಮ್‌ಸ್ಟೋನ್ ನಿಂದ ತಯಾರಾದ ಈ ಶಿಲ್ಪದಲ್ಲಿ ಕೆಲವು ಸೂಕ್ಷ್ಮ ಉಪಕರಣಗಳು ಅಂದರೆ ಚಾಕು ಇತ್ಯಾದಿಗಳನ್ನು ಬಳಸಲಾಗಿದ್ದು, ಕೆತ್ತನೆ ಪೂರ್ಣಗೊಂಡ ನಂತರ ಶಿಲ್ಪವನ್ನು ಉಜ್ಜಿ ಅದಕ್ಕೆ ಮೆರಗು ಕೊಡಲಾಗಿದೆ. ಇನ್ನುಳಿದಂತೆ ಈ ಶಿಲ್ಪವು ಮೂಲಭೂತವಾಗಿ ವೃತ್ತಾಕಾರಕ್ಕೆ ಹತ್ತಿರವಾದ ಅವಯವಗಳನ್ನು ಹೊಂದಿದೆ. ಈ ಶಿಲ್ಪದಲ್ಲಿರುವ ಮಹಿಳೆಯ ತಲೆ, ಸ್ತನಗಳು, ತೊಡೆ, ಹೊಟ್ಟೆ ಮತ್ತು ಸೊಂಟದ ಕೆಳಗಿನ ಭಾಗವು ಇದಕ್ಕೆ ಪುಷ್ಟಿ ನೀಡುವಂತಿದೆ. ಅಲ್ಲದೇ ಈ ಭಾಗಗಳೇ ಢಾಳಾಗಿ ತೋರುತ್ತದೆ. ಕಲಾವಿದನ ಈ ಮಾದರಿಯ ಕಲ್ಪನೆಯನ್ನು ನಾವು ಊಹಿಸಬಹುದೇ ಹೊರತು ಅದನ್ನು ಹೀಗೆಯೇ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಆದರೂ ಈ ಶಿಲ್ಪದ ಮೇಲಿನ ಅಧ್ಯಯನವು ಇದನ್ನು ಅಭಿವೃದ್ಧಿಯ ದೇವತೆ ಎಂದು ತರ್ಕಿಸಿದೆ. ಈ ಶಿಲ್ಪವನ್ನು ಇಂದಿನ ಕಲಾವಿದನ ಶಿಲ್ಪದೊಡನೆ ಹೋಲಿಸಿ ಅಂತಹ ಉತ್ತಮ ಕೆತ್ತನೆ ಇದಲ್ಲವೆಂದು ಭಾವಿಸಬಹುದಾದರೂ ಮಾನವನ ಮೊತ್ತ ಮೊದಲ ಪ್ರಯೋಗವೆಂದು ಹುಬ್ಬೇರಿಸಬಹುದು.     -ಸುಗಂಧ

ದಿನದರ್ಶಿ

ಜುಲೈ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
28293031  

ಅನುಭವಿಸಿದವರು

  • 2,615 ಅನುಭಾವಿಗಳು