You are currently browsing the monthly archive for ಮಾರ್ಚ್ 2008.

ವಿಮರ್ಶೆಯ ಅಗತ್ಯವಿಲ್ಲ ಎನಿಸುತ್ತೆ, ಕೆಲವೊಮ್ಮೆ. ಆದರೆ ವಿಮರ್ಶೆ ಮಾಡುವವರು ಕಲಾವಿದ ಮತ್ತು ಕೇಳುಗರ ನಡುವಿನ ಕೊಂಡಿಯಾದದ್ದರಿಂದ ಯಾಕಿರಬಾರದ್ದೂ ಎನಿಸುತ್ತೆ ಮತ್ತೊಮ್ಮೆ. ಆದರೆ ಯಾರೇ ಆಗಲೀ, ಹೊಸ ಪ್ರಯತ್ನಕ್ಕೆ ಹುರುಪು ತುಂಬುವವರು ಇರಬೇಕು. “ಇಗೊ’ ಅಡ್ಡ ಬಾರದಿದ್ದರೆ ಸಾಕು.
ಚಂದ್ರಶೇಖರ

modern-art-n.jpg 

ಬಹಳ ದಿನಗಳಿಂದ ನನಗನ್ನಿಸುತ್ತಿರುವ ಅಭಿಪ್ರಾಯವಿದು. ಅಮೂರ್ತ ಕಲೆಗಳ ವಿಮರ್ಶೆ ಬಗ್ಗೆ. ಒಟ್ಟೂ ಇಲ್ಲಿನ ಪ್ರಯತ್ನದ ಅರ್ಥಪೂರ್ಣತೆ ಎಲ್ಲಿ ಸಾಕಾರಗೊಳ್ಳಬಲ್ಲದು ಎಂಬುದೇ ನಿಗೂಢ.
ಸಂಗೀತದ ವಿಷಯವನ್ನೇ ತೆಗೆದುಕೊಳ್ಳೋಣ. ಇಂದು ಸದಾ ವಿಮರ್ಶೆ ಹಾಗೂ ವಿಮರ್ಶಕರ ಅಡ್ಡಕತ್ತರಿಗೆ ಸಿಲುಕಿ ನಲುಗುತ್ತಿರುವ ಕಲೆಯ ಮುಖ್ಯ ಕ್ಷೇತ್ರವೆಂದರೆ ಸಂಗೀತ ಹಾಗೂ ನೃತ್ಯ. ನಂತರ ಚಿತ್ರಕಲೆಯದ್ದು.

ವಿಮರ್ಶಕರೆಲ್ಲಾ ಚಾಟಿ ಹಿಡಿದು ನಿಂತುಬಿಟ್ಟಿದ್ದಾರೆ. ಮಾತೆತ್ತಿದರೆ ಅದನ್ನು ಬೀಸುವುದೇ. ಅದಕ್ಕಾಗಿ ಕಲಾವಿದ ವರ್ಗದಲ್ಲೂ ಕೆಲಪಾಲು ವಿಮರ್ಶಕರನ್ನು ಓಲೈಸುವ ನೆಲೆಗೂ ತಲುಪಿರುವುದು ಸುಳ್ಳಲ್ಲ. ಕೆಲ ವಿಮರ್ಶಕರು ಅದನ್ನೇ ಗುತ್ತಿಗೆ ಹಿಡಿದಿದ್ದಾರೆ. ಸಾರ್ವಭೌಮರಾಗಿ ಮೆರೆಯುವ ದಿಸೆಯಲ್ಲಿ ವಿಮರ್ಶಕರ ಪ್ರಯತ್ನ ಮೇರೆ ಮೀರುತ್ತಿದ್ದರೆ, ಕಲಾವಿದರು ಸೋಲುತ್ತಿದ್ದಾರೆ. ವಿಮರ್ಶಕರನ್ನು ಓಲೈಸುವುದು ಅಥವಾ ವಿಮರ್ಶಕರನ್ನು ನಿರ್ಲಕ್ಷ್ಯಿಸಿ ಸಂಗೀತ ಸಭಾಗಳಿಂದ ಅವಗಣನೆಗೆ ಗುರಿಯಾಗುವುದು-ಎರಡೇ ಹಾದಿ ಕಲಾವಿದರಿಗೆ.

ಮೂಲಭೂತ ಪ್ರಶ್ನೆಯೆಂದರೆ ಒಂದು ಅಮೂರ್ತ ಕಲೆಯನ್ನು ವಿಮರ್ಶೆ ಯಾವ ದಿಸೆಯಲ್ಲಿ ಸೆರೆ ಹಿಡಿಯಬಲ್ಲದು ಎಂಬುದು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ರಾಗದ ಆಲಾಪನೆಯನ್ನೋ, ಚೀಜ್‌ನ್ನು ಪ್ರಸ್ತುತ ಪಡಿಸುವ ಮಾದರಿಯನ್ನೋ ವಿಮರ್ಶೆ ಹಿಡಿದುಕೊಡಲಾರದು. ಇದೇ ಮಾತು ಎಲ್ಲದಕ್ಕೂ ಅನ್ವಯ. ಒಂದು ವರ್ಣದ ನಿರೂಪಣೆಯನ್ನು ಪದಗಳಲ್ಲಿ ತುಂಬಿಕೊಡಲು ಸಾಧ್ಯವೇ? ಸಮುದ್ರವನ್ನು ಒಂದು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ಸಾಂಕೇತಿಕವೆನಿಸಬಲ್ಲದು. ಆದರೆ ಒಂದು ಸಂಗೀತದ ಕಛೇರಿಯ ಸೊಬಗನ್ನು ಹೀಗೆ ಸಾಂಕೇತಿಸಲು ಹೊರಡುವುದು ಸಾಧುವಲ್ಲ ಎಂಬುದು ನನ್ನ ಅಭಿಪ್ರಾಯ.

ಒಂದು ಕಛೇರಿಯಲ್ಲಿ ಹಾಡಿದ ಕೀರ್ತನೆಗಳ ವಿವರವನ್ನೋ, ರಾಗದ ವಿವರಣೆಯನ್ನೋ ನೀಡುವುದು ಹಾಗಾದರೆ ವಿಮರ್ಶೆಯೇ? ಅಲ್ಲ. ವಿಶ್ಲೇಷಣೆಯನ್ನೇ ವಿಮರ್ಶೆ ಎನ್ನಬಹುದೇ? ಎಂದರೂ ಆ ನಿಲುವೂ ತಪ್ಪೇ. ವಿಶ್ಲೇಷಣೆಯಲ್ಲಿ ತೀರ್ಮಾನವಿರುವುದಿಲ್ಲ ; ಒಂದು ಆರೋಗ್ಯಕರ ಸಂವಾದ ಸಾಧ್ಯವಿರುತ್ತದೆ. ಅಲ್ಲಿಗೆ ವಿಮರ್ಶೆ ಏನನ್ನು ಮಾಡಬೇಕು?

ನನಗೆ ಅನ್ನಿಸುವುದು ಹೀಗೆ. ವಿಮರ್ಶೆ ಪ್ರಶಂಸೆ ಮಾದರಿಗೆ ಒಗ್ಗಿಕೊಳ್ಳಬೇಕು. ಇಲ್ಲಿ ಪ್ರಶಂಸೆಯ ಅರ್ಥ ವ್ಯಕ್ತಿ ಪ್ರಶಂಸೆಯಾಗಲೀ, ಸಂಸ್ಥೆ ಪ್ರಶಂಸೆಯಾಗಲೀ, ಕಲೆಯ ಪ್ರಶಂಸೆಯಾಗಲೀ ಅಲ್ಲ. ಇಲ್ಲಿ ಆಗಬೇಕಾದದ್ದು ನಿಜವಾಗಿಯೂ ಆರ್ಟ್ ಅಪ್ರಿಷಿಯೇಷನ್. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿ ಅಪ್ರಿಷಿಯೇಷನ್ ಎಂದರೆ ಅಭಿವೃದ್ಧಿ ಎನ್ನುವ ಅರ್ಥವೂ ಇದೆ.

ಅಮೂರ್ತ ಕಲೆಗಳ ಸಂದರ್ಭದಲ್ಲೂ ಈ ಅಭಿವೃದ್ಧಿಯಾಗಬೇಕು. ಕಲೆಯ, ಕಲಾವಿದನ ಹಾಗೂ ಸಂಗೀತ ಕಛೇರಿಯ ಸೊಬಗಿನ ಅಭಿವೃದ್ಧಿಯಾಗಬೇಕು. ಈ ದಿಸೆಯಲ್ಲಿ ವಿಮರ್ಶಕರು ತಮ್ಮ ತಜ್ಞತೆಯನ್ನು ಮೆರೆಯಬೇಕು.

ಒಂದು ಸಂಗೀತ ಕಛೇರಿಯ ಪರಿಪೂರ್ಣತೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಸಾಧ್ಯವಾಗಿಸುವ ನೆಲೆಯಲ್ಲಿ ವಿಮರ್ಶಕರು ಕ್ರಿಯಾಶೀಲರಾಗಬೇಕು. ಹಾಗೆಯೇ ರಸಾನುಭೂತಿಗೆ ಸಾಧ್ಯವಾಗುವ ಲಕ್ಷಣಗಳನ್ನು ಕಲಾವಿದರಿಗೆ ಮನದಟ್ಟು ಮಾಡುವ ಕಾರ್ಯವೂ ನಡೆಯಬೇಕು. ಮೂರು ಗಂಟೆಯ ಕಛೇರಿಯ ಒಟ್ಟು ಅನುಭೂತಿಗೆ ಪೂರಕ ಅಂಶಗಳನ್ನು ಒದಗಿಸುವ ಕೆಲಸವೂ ವಿಮರ್ಶಕನ ನೆಲೆಯಿಂದಲೇ ಹೊರಡಬೇಕಾದದ್ದು.

ತಜ್ಞತೆ ಎಂದಿಗೂ ವಿರೋಧದ ನೆಲೆಯಿಂದ ಹುಟ್ಟುವುದಿಲ್ಲ ; ಬದಲಿಗೆ ಸ್ವೀಕಾರ್ಹ ನೆಲೆಯಿಂದ ಹುಟ್ಟುತ್ತದೆ. ಪ್ರಯೋಗಶೀಲತೆ ಇಲ್ಲದೇ ಪರಂಪರೆ ಬೆಳೆಯಲಾರದು ಎಂಬುದು ಸ್ಪಷ್ಟ. ಕಲಾವಿದನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುವುದಲ್ಲದೇ, ಒಂದು ಪರಂಪರೆಯ ನಿರಂತರ ಪ್ರವಹಿಸುವಿಕೆಗೆ ಅರ್ಥಪೂರ್ಣ ಸಹಕಾರ ನೀಡಬಲ್ಲದು ಈ ತಜ್ಞತೆ. ಪ್ರತಿ ಹೊತ್ತಿನ ಪ್ರಯೋಗಶೀಲತೆಯನ್ನೂ ಸೂಕ್ಷವಾಗಿ ಗುರುತಿಸುತ್ತಲೇ ಅದರಿಂದಾಗಬಹುದಾದ ಗುಣಾವಗುಣಗಳನ್ನು ಲಕ್ಷಿಸಿ ನಿರ್ದಿಷ್ಟತೆ ರೂಪಿಸುವುದೂ ಈ ತಜ್ಞರ ಹೊಣೆ.

ಇಂತಹ ತಜ್ಞರಿಗೆ ಪ್ರಯೋಗಶೀಲತೆ ಯಾವುದೇ ದಿಕ್ಕಿನಿಂದ ಬಂದರೂ ಒಪ್ಪಿಕೊಳ್ಳುವ ಶುದ್ಧ ಮನಸ್ಥಿತಿ ಬೇಕು. ಹಿರಿಯನೋ, ಕಿರಿಯನೋ ಎಂಬ ಮಾತು ಬಿಟ್ಟು, ಪ್ರಯೋಗಕ್ಕೊಂದು ಪ್ರೇರಣೆ ನೀಡುವ ವಾತಾವರಣ ನಿರ್ಮಿಸುವ ಇಚ್ಛೆ ಇರಬೇಕು. ಜತೆಗೆ ಟೀಕೆಯನ್ನೂ ಸೂಕ್ಷ್ಮವಾದ ದನಿಯಲ್ಲಿ ಹೇಳುವ ಮುಖೇನ ಆದ ತಪ್ಪನ್ನು ಸರಿಪಡಿಸುವ ಪ್ರಯತ್ನಶೀಲತೆ ಬೇಕು. ಇದೆಲ್ಲಕ್ಕಿಂತ ಅವರ ಮುಖ್ಯ ಹೊಣೆ ಸೊಬಗನ್ನು ಹೆಚ್ಚಿಸುವ ಪರಿಯಾಗಿರಬೇಕು. ಪ್ರತಿಯೊಬ್ಬನನ್ನೂ ರಸಾನುಭೂತಿಯ ಕಡೆಗೆ ನಡೆಸುವ ಕಾರ್ಯದಲ್ಲಿ ವಿಮರ್ಶಕ ಮಹತ್ವದ ಪಾತ್ರ ವಹಿಸುತ್ತಾನೆ. ಇದು ಆಗಬೇಕಾದದ್ದೇ.

ಪ್ರತಿ ಸಂದರ್ಭದಲ್ಲೂ ಸಂಗೀತದ ಬಗ್ಗೆ ಮತ್ತೊಬ್ಬ ಅರಸಿಕನಲ್ಲಿ ಪ್ರೀತಿ ಹುಟ್ಟಿಸುತ್ತೇನೆ, ಕಲೆಯ ಬಗ್ಗೆ ಗಮನ ಹರಿಸಲು ಪ್ರಯತ್ನಿಸುತ್ತೇನೆ ಎಂಬ ಸೌಜನ್ಯ, ವಿನಯವೂ ವಿಮರ್ಶಕನಲ್ಲಿರಬೇಕು. ಅಷ್ಟು ಬಿಟ್ಟರೆ ಸಂಗೀತ, ಚಿತ್ರಕಲೆಯನ್ನು (ಅಮೂರ್ತ ಕಲಾ ಪ್ರಕಾರಗಳು) ಏನೂ ಮಾಡಲಿಕ್ಕಾಗದು.

ಸಾಹಿತ್ಯದ ವಿಷಯದಲ್ಲಿ ವಿಮರ್ಶೆಯ ಪಾತ್ರ ಬೇರೆಯಾದದ್ದು. ಸಾಹಿತ್ಯ ಕೃತಿಗೂ ವಿಮರ್ಶೆ ಯಾಕೆ ಬೇಕು? ಎಂಬ ಮಾತೂ ಇದೆ. ಹಾಗಾದರೆ ನೀವು ಯಾಕೆ ಕಾದಂಬರಿ, ಕಥೆ, ಕವಿತೆ ಬರೆಯುತ್ತೀರಿ? ಎನ್ನುವ ವಿಮರ್ಶಕರಿದ್ದಾರೆ. ಆದರೆ ಆ ಬಗ್ಗೆ ಇಲ್ಲಿ ಹೆಚ್ಚಿನ ಚರ್ಚೆ ಬೆಳೆಸುವುದಿಲ್ಲ. ನಮ್ಮ ಮೂಲ ಚರ್ಚೆಯ ನೆಲೆ ಕಲಾ ಪ್ರಕಾರಗಳ ಬಗ್ಗೆ.

ಶಾಸ್ತ್ರ ಇರುವುದು ಮೀರಲಿಕ್ಕೋ, ಆ ಮಿತಿಯೊಳಗೇ ಸುತ್ತಾಡಲಿಕ್ಕೋ ಎಂಬುದು ನಿಗದಿಯಾಗಬೇಕು. ಶಾಸ್ತ್ರವೇ ಒಂದು ಅಂಚುಪಟ್ಟಿಯಾಗಿ ಬಿಟ್ಟರೆ, ಪ್ರಯೋಗಶೀಲತೆಗೆ ಬೆದರುಬೊಂಬೆಯಾದರೆ ಪರಂಪರೆಯ ಪ್ರವಹಿಸುವಿಕೆಗೆ ಅಡ್ಡಿಯಾಗಬಲ್ಲದು. ಶಾಸ್ತ್ರ ಮೂಲಧಾತು. ಕಲಾವಿದನ ಪ್ರತಿ ಪ್ರಯತ್ನವೂ ಈ ನೆಲೆಯಿಂದಲೇ ಹೊರಟಿರಬೇಕು. ದಿಗಂತದೆತ್ತರ ದಲ್ಲಿ ಗಾಳಿಪಟ ಹಾರಿಸುವ ಹುಡುಗ ನಿಂತಿರುವುದು ನೆಲದ ಮೇಲೆ. ಅಲ್ಲಿಗೆ ನೆಲೆವೇ ನೆಲೆ. ಗಾಳಿಪಟ ಹಾರುವ ಪ್ರದೇಶ ಗಾಳಿಪಟದ ನೆಲೆಯೇ ಹೊರತು ಹುಡುಗನ್ನದಲ್ಲ. ಪ್ರಯೋಗಶೀಲತೆ ಗಾಳಿಪಟದ ಸಂಕೇತವಾಗಿರಿಸಿಕೊಂಡರೆ, ಕಲಾವಿದ ಇಲ್ಲಿ ಹುಡುಗ ಎಂದು ವ್ಯಾಖ್ಯಾನಿಸಿಕೊಳ್ಳಬಹುದು. ಶಾಸ್ತ್ರ ಇಂತಹ ಒಂದು ದಾರ ಅಥವಾ ನೆಲ. ಅದರ ಆಧಾರದ ಮೇಲೆ ಹಾರುವ ಗಾಳಿಪಟ ಪ್ರಯೋಗಶೀಲತೆ.

ಆದರಿಂದು ಇಂತಹ ಪ್ರಯೋಗಶೀಲತೆಯನ್ನು ಬೆಳೆಸುವ ವಿಮರ್ಶಕರ ಸಂಖ್ಯೆ ಕಡಿಮೆಯೇ. ಯದ್ವಾತದ್ವಾ ಹೊಗಳುವುದು ಅಥವಾ ಟೀಕಿಸುವುದಷ್ಟೇ ವಿಮರ್ಶೆಯ ಎನಿಸಿಬಿಟ್ಟರೆ ಕಲಾವಿದರು ಯಾವುದನ್ನು ಆರಿಸಿಕೊಳ್ಳಬೇಕು ? ಜನಪ್ರಿಯತೆ ನಮ್ಮಲ್ಲಿ ಸೃಜನಶೀಲತೆ ಬೆಳೆಸುತ್ತದೋ ಅಥವಾ ಪ್ರಬುದ್ಧತೆ, ನಿರಂತರ ಪ್ರಯತ್ನಶೀಲತೆಯೋ ಅಥವಾ ಇನ್ನೇನೋ ಎಂಬುದು ಇನ್ನೂ ನಮ್ಮ ವಿಮರ್ಶಕರಿಗೆ ಸ್ಪಷ್ಟವಾಗಿಲ್ಲ.

ಪ್ರಯೋಗ ಪ್ರತಿ ಜನಪ್ರಿಯ ಅಥವಾ ಪ್ರತಿಷ್ಠಿತ ಕಲಾವಿದನ ಸೊತ್ತು ಎಂಬಂತೆ ಪೇಟೆಂಟ್ ಕೊಡುವ ಮಾದರಿ ಉದ್ಭವಿಸುತ್ತಿದೆ. ಇಲ್ಲಿ ಹೊಸದೇನನ್ನೋ ಮಾಡಬೇಕೆಂದು ಹುಮ್ಮಸ್ಸಿನಿಂದ ಪುಟಿಯುವ ಮನಸ್ಸಿಗೆ ವಯಸ್ಸಾಗಿರಬೇಕು ಎಂದು ಆಶಿಸುವುದು ಎಷ್ಟರ ಮಟ್ಟಿಗೆ ಸರಿ ? ಸಂಪ್ರದಾಯದ ಹೆಸರಿನಲ್ಲಿ ಮೀರುವ ಪ್ರತಿ ಯತ್ನವನ್ನು ಕಟ್ಟಿ ಹಾಕುವುದು ಸರಿಯೇ ?  ಹೋಗಲಿ, ವಿಮರ್ಶಕರು ಒಪ್ಪಿಕೊಂಡದ್ದನ್ನು ಮಾತ್ರ ಜನ ಒಪ್ಪಿಕೊಳ್ಳುತ್ತಾರೆಯೇ?   ಇವೆಲ್ಲವೂ ಪ್ರಶ್ನೆಗಳು.

ಇತ್ತೀಚೆಗೆ ನಡೆದ ಒಂದು ಉದಾಹರಣೆ. ಕರ್ನಾಟಕ ಮೂಲದ ಅನಿವಾಸಿ ಕಲಾವಿದ ಬಂದು ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು. ಇನ್ನೂ ಯುವ ಕಲಾವಿದ. ಕಛೇರಿ ಚೆನ್ನಾಗಿಯೇ ಇತ್ತು. ಆರಿಸಿಕೊಂಡ ವರ್ಣ, ಅದರ ನಿರೂಪಣೆ, ಸಾಂಗತ್ಯ ಎಲ್ಲವೂ ಸೂಕ್ತವಾಗಿತ್ತು. ಟೀಕಿಸುವುದೇ ನಿಮ್ಮ ಉದ್ದೇಶವಾದಾಗ ಏನಾದರೂ ಹುಡುಕಲೇಬೇಕೆಂಬ ಮನೋಭಾವ ಕೆಲವು ವಿಮರ್ಶಕರದ್ದು. ಅಂದು ಕಾರ್ಯಕ್ರಮದಲ್ಲಿ ಹಾಜರಿದ್ದ ವಿಮರ್ಶಕರ ಬಳಿ ಕಲಾವಿದ ಕಛೇರಿ ಮುಗಿಸಿ ಬಂದಾಗ ” ಎಲ್ಲಾ ಸರಿ, ಆದರೂ ತಪ್ಪು’ ಎನ್ನುವ ಧಾಟಿಯಲ್ಲಿ ಮಾತನಾಡಿದರು. “ನಿನಗೆ ಅರೋಗೆನ್ಸ್ ಇದೆ. ಈಗಲೇ ಎಲ್ಲಾ ಕಲಿತಿದ್ದೇನೆ ಎಂಬ ಅಹಂಕಾರ ಇದೆಯಲ್ಲ’ ಎಂದು ಝಾಡಿಸಿದರೆ  ಹೇಗಿರುತ್ತೆ?  ಇದು ಕಲೆಯನ್ನು ಬೆಳೆಸುವ ಯಾವ ಮಾದರಿ? ಯಾವ ಪ್ರಶಂಸೆ ?

ಸಂಗೀತ ಕಛೇರಿಯ ವಿಮರ್ಶೆಯಲ್ಲಿ ಕಲಾವಿದ ಪ್ರಸ್ತುತಪಡಿಸಿದ ಕೃತಿಗಳ, ರಾಗಗಳ  ಮಾಹಿತಿ ಬಿಟ್ಟರೆ ಬೇರೇನೂ ಇರುವುದಿಲ್ಲ. ಇಲ್ಲದಿದ್ದರೆ ಇಲ್ಲ ಸಲ್ಲದ ಉಪಮೆಗಳ ಅಲಂಕಾರ. ಪದಗಳಲ್ಲಿ ವರ್ಣಿಸಲಾಗದ ಅನುಭವವನ್ನು  ಪದಗಳಲ್ಲಿ ಹೇಳಲಾರೆ ಎಂದು ಒಪ್ಪಿಕೊಳ್ಳುವ, ಹಾಗೆಯೇ ಕ್ರಿಯಾಶೀಲವಾಗುವ ಪ್ರಯತ್ನವೇ ಇಲ್ಲ. ವರ್ಣನೆ ಮಿತಿ ಮೀರುವ ನೆಲೆಯಲ್ಲೇ ವಿಮರ್ಶೆ ಎನ್ನಿಸಿಕೊಳ್ಳುವುದು ಅಂತ್ಯವಾಗುತ್ತದೆ. ಇಷ್ಟು ಬಿಟ್ಟರೆ, ಈ ಕೃತಿ ಸರಿಯಾಗಿ ನಿರೂಪಿಸಲಿಲ್ಲ, ನೆರವಲ್ ಸರಿ ಮಾಡಲಿಲ್ಲ, ಇಂತದ್ದು ಬಿಟ್ಟರೆ ಬೇರೇನು? ಇದನ್ನು ಹೊರತುಪಡಿಸಿದ ಗುಣಾತ್ಮಕ ಅಂಶಗಳೇನು? ಯೇಸುದಾಸ್ ಅವರ ಒಂದು ಕಛೇರಿಗಿಂತ ಈ ಕಛೇರಿಯ ಅಂಶವೇನು?  ಹೊಸ ಪ್ರಯತ್ನ ಹೇಗಿರಬಹುದಿತ್ತು? ಎಂಬ ಸಲಹೆ ರೂಪದ ನೆಲೆ ಯಾಕೆ ಸಾಧ್ಯವಾಗದು?

ಒಬ್ಬ ಕ್ರಿಯಾಶೀಲ ಕಲಾವಿದನನ್ನು ಬೆಳೆಸುವವ ಮತ್ತು ಇಳಿಸುವ ಶಕ್ತಿ ನನ್ನಲ್ಲೇ ಅಡಗಿದೆ ಎಂದು ತಿಳಿದುಕೊಳ್ಳುವ ವಿಮರ್ಶಕನಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಾಗದು. ಪ್ರಚಾರದ ಅಬ್ಬರ ಅನಿವಾರ್ಯ ಎನಿಸಿರುವ ಹೊತ್ತಿನಲ್ಲಿ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಕಡೆಗಣಿಸಲಾಗದು. ಆದರೆ ಅಲ್ಲೂ ವಸ್ತುನಿಷ್ಠ ವಿಮರ್ಶೆ ಬರಬೇಕು, ಅದು ಕಲಾವಿದ, ಕಲೆಯ ಬೆಳವಣಿಗೆಗೆ ಪೂರಕವಾಗಿರಬೇಕು. ತಪ್ಪನ್ನು ಸರಿಪಡಿಸುವ ಹಾದಿಯಲ್ಲಿ.

ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಸುಲಭದ ಕೆಲಸ ದಾರಿ ರೂಪಿಸುವವನಿಗೆ ಹೋಲಿಸಿದರೆ. ಇಲ್ಲಿ ವಿಮರ್ಶಕ ದಾರಿ ರೂಪಿಸುವವನಾಗಬೇಕು. ಅವನೊಬ್ಬ ಮುಂಚೂಣಿಕಾರ. ಅಭಿರುಚಿ ನಿರ್ಮಾಣದ ಕಾರ್ಯದಲ್ಲಿ ಅವನೇ ಮೊದಲಿಗ. ಅವನ ಹಿಂದೆ ಮಿಕ್ಕವರೆಲ್ಲರೂ. ಆದರೆ ಈಗ ಬಹುಪಾಲು ವಿಮರ್ಶಕರು ಮಾರ್ಗದರ್ಶಕರಂತೆ ಠೀವಿ ಕೊಡುತ್ತಿರುವುದು ಪರಂಪರೆಯ ಪ್ರವಹಿಸುವಿಕೆಯ ವೇಗವನ್ನು ಕುಂಠಿತಗೊಳಿಸಬಲ್ಲದು.

ಸಂಕ ಎಂಬುದು ಗ್ರಾಮೀಣ ನುಡಿ. ಕರಾವಳಿ ಬದಿಯ ಗದ್ದೆಬೈಲಿನಲ್ಲಿರುವ ತೋಡನ್ನು ದಾಟಲು ನಿರ್ಮಿಸುವ ಸೇತುವೆ ಮಾದರಿಯದ್ದು. ಇದರ ಒಟ್ಟೂ ಕಾರ್ಯ ದಾರಿಹೋಕನನ್ನು ಮತ್ತೊಂದು ತುದಿಗೆ ದಾಟಿಸುವುದು ಅಥವಾ ದಾಟುವ ಪ್ರಕ್ರಿಯೆಯಲ್ಲಿ ಒಂದು ಪಾತ್ರ ವಹಿಸುವುದಷ್ಟೆ.

ಎರಡು ತೀರಗಳ ಅಥವಾ ಎರಡು ಬದಿಗಳ ನಡುವೆ ಸಂಬಂಧಸೇತುವಾಗಿ ಕಾರ್ಯ ನಿರ್ವಹಿಸುವ ಸಂಕದ ಪಾತ್ರವನ್ನೇ ವಿಮರ್ಶೆ ವಹಿಸಬೇಕೇ ? ಎಂಬುದು ಚರ್ಚೆಗೀಡಾಗಬೇಕು. ವಿಮರ್ಶೆ ಮತ್ತೊಂದು ತೀರವೆನ್ನುವ ಹಾಗೆ ಅಸ್ತಿತ್ವ ಕಲ್ಪಿಸಲು ಹೊರಟರೆ ಅದರದ್ದೇ ಬೇರೆ ಹಾದಿ. ಅಮೂರ್ತ ಕಲೆಗಳ ಅನುಭವದ ವಿಚಾರದಲ್ಲಿ ವಿಮರ್ಶೆ ಕೇವಲ ಸಂಕವಷ್ಟೇ. ಇದು ಲಘುವಾದ ಮಾತಲ್ಲ ; ಸಂಬಂಧ ಬೆಸೆಯುವ ಗುರುತರವಾದ ಹೊಣೆ. ಇದನ್ನು ವಿಮರ್ಶಕ ಹೊತ್ತರೆ ವಿಮರ್ಶೆಗೆ ಮತ್ತಷ್ಟು ಘನತೆ ಬಂದೀತಲ್ಲವೇ ?                                            : ಬರಹ – ಗಂಧ, ಚಿತ್ರ- ಸುಗಂಧ

(ಜುಗಲ್ ಬಂದಿ ಚರ್ಚೆಯ ಅಂಕಣ. ನಾನು ಆರಂಭಿಸಿದ್ದೇನೆ. ದಯವಿಟ್ಟು ನೀವು ಮುಂದುವರೆಸಿ)

ನಮ್ಮ ಬ್ಲಾಗ್ ಗೆ ಸಿಕ್ಕ ಮೊದಲ ಪ್ರತಿಕ್ರಿಯೆಯೇ ಗೆಜ್ಜೆ ಕಟ್ಟಿಸಿದೆ. ನವಿಲು ಕುಣಿಯಲು ಕರೆಯುತ್ತಿದೆ. ನಾವಿನ್ನು ಕುಣಿಯಬೇಕಷ್ಟೇ. ಶ್ರೀದೇವಿ ಕಳಸದ ನಮ್ಮ ಕೂಗಿ ಕರೆಯುತ್ತಿರುವ ನವಿಲಿಗೆ ಸಂವಾದಿಸಿರುವುದು ಕವನದ ರೂಪದಲ್ಲಿ. ನಮ್ಮಲ್ಲೂ ಉತ್ಸಾಹ ಮೂಡಿಸಿದ ಮೊದಲ “ಘಮಘಮ” ದ ತರಂಗವಾದ್ದರಿಂದ ಇಲ್ಲಿ ಕೊಡುತ್ತಿದ್ದೇವೆ.

ಈ ಮಧ್ಯೆ ಈ ನವಿಲ ಕೂಗಿಸಿದವರು ಸುಗಂಧ.

ನಸುಗೆಂಪು ನಗೆಚೆಲ್ಲಿ
ನೆಲ-ಮುಗಿಲು ನಸುನಾಚಿ
ಕಡು ನೀಲಿ ಕೊರಳು, ಗಿಳಿಹಸಿರ ಕುಸುರಿ,
ನೆಲ ಕೆದರಿ ಗರಿ ಗೆದರಿ
ಗಿರ ಗಿರನೆ ತಿರು-ತಿರುಗಿ
ಮೈ ತುಂಬಾ ಕನಸ ಕಣ್ಣ,
ಮರಳುವನೆ ಮಾಧವ
ನುಡಿಸುವನೆ ಮುರಳಿಯ…

ಪ್ರತಿಕ್ರಿಯೆ ನೀಡಿದ ಶ್ರೀದೇವಿಗೂ ಧನ್ಯವಾದ. ಪ್ರೀತಿ ಮತ್ತು ಬ್ಲಾಗ್ ಗೆ ಭೇಟಿ ನೀಡುತ್ತಿರಿ.

ಗಂಧಸುಗಂಧ

wm12.jpg  

ಲ್ಲಿ ಅಚ್ಚು ಕಟ್ಟಾದ ಅಭಿನಯ ನೀಡಿ ಮನಸೂರೆಗೊಳ್ಳುವ ಪಾತ್ರಧಾರಿಗಳು ಪಕ್ಷಿಗಳು! ಪಕ್ಷಿಗಳಿಂದ ಶುರುವಾಗಿ ಅವುಗಳಿಂದಲೇ ಮುಂದುವರೆದು, ಮುಗಿಯುವ ಚಿತ್ರದಲ್ಲಿ ಕಥೆ ಗೌಣವಾಗಿಬಿಡುತ್ತದೆ. ೯೮ ನಿಮಿಷದ ಚಿತ್ರದ ಪ್ರತೀ ಫ್ರೇಂಗಳೂ ಅದ್ಭುತ ಕಾದಂಬರಿಗಳಾಗಿಬಿಡುತ್ತವೆ! ಹೀಗೆ, ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ? ಎಂಬ ಸಾಲುಗಳನ್ನು ನೆನಪಿಸುತ್ತಾ ಹಕ್ಕಿಗಳ ಹಾರುವಿಕೆಯೊಂದಿಗೇ ನಮ್ಮನ್ನು ಧ್ಯಾನಸ್ಥಿಥಿಗೊಯ್ಯುವ ಚಿತ್ರವೇ ವಿಂಗ್ಡ್ ಮೈಗ್ರೇಶನ್!
      ಅನುಭವಕ್ಕಿಂತ ಕಥೆ ಮುಖ್ಯವೆನಿಸಿದಲ್ಲಿ ಈ ಸಿನಿಮಾ ನಿಮಗಲ್ಲ! ಸಿನಿಮಾ ಸೀಮೆಯ ಸಿದ್ಧಾಂತಗಳ ಚೌಕಟ್ಟನ್ನು ಮೀರಿ ನಿಂತ ಈ ಚಿತ್ರದಲ್ಲಿ ಸಂಭಾಷಣೆಗಳೆಂಬ ಆಡಂಬರವಿಲ್ಲ. ಚಿತ್ರಕ್ಕೆ ಅದು ಅಗತ್ಯ ಅಂತನ್ನಿಸುವುದೂ ಇಲ್ಲ! ಚಿತ್ರದುದ್ದಕ್ಕೂ ತಡವರಿಸುತ್ತಾ ನೀಡುವ ವಿವರಣೆ ಕಿರಿ ಕಿರಿಯೆನ್ನಿಸಬಹುದು. ಹಾಗಾದಲ್ಲಿ ಸಬ್ ಟೈಟಲ್ ನೋಡಿ ಮಾಹಿತಿಗಳ ಕಟ್ಟು ಕಟ್ಟಬಹುದು. ಉಳಿದಂತೆ ಇಲ್ಲಿರುವುದು ನಿಸರ್ಗದ ಭಾಷೆಗೆ ಕಿವಿಯಾನಿಸುವವನಿಗೆ ಮಾತ್ರ ಅರ್ಥವಾಗಬಹುದಾದ ಹಕ್ಕಿಗಳ ಕಲರವ ಮತ್ತು ಚಿತ್ರದುದ್ದಕ್ಕೂ ಕಣ್ಣಿಗೆ ಹೋಲಿ! ಪ್ರೇಕ್ಷಕನಿಗೆ ನಗಿಸುವ, ಖುಷಿ ಪಡಿಸುವ, ನಾಚಿಕೆಯಿಂದ ಮುರುಟಿ ಹೋಗುವಂತೆ ಮಾಡುವ, ಕುರ್ಚಿಯಂಚಿಗೆ ತಂದು ಕೂರಿಸುವ, ಕೆಲವೊಮ್ಮೆ ಕಣ್ಣಂಚನ್ನು ತೇವಗೊಳಿಸುವ ಕಾರ್ಯದೊಂದಿಗೆ ಹಕ್ಕಿಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ. ಒಂದರ್ಥದಲ್ಲಿ ಈ ಚಿತ್ರ ನಿರ್ಮಿಸಿದ್ದು ಹಕ್ಕಿಗಳಿಗಾಗಿಯೇ ಎನ್ನಲಡ್ಡಿಯಿಲ್ಲ.
       ೯೮ ನಿಮಿಷಗಳ ಕಾಲ ಕೇವಲ ಹಕ್ಕಿಯ ಹಾರುವಿಕೆಯೊಂದನ್ನೇ ತೋರಿಸುತ್ತಾ ವೀಕ್ಷಕನ ಚಿತ್ತವನ್ನು ಚಿತ್ರದಿಂದಾಚೆ ಸರಿಯದಂತೆ ತಡೆದು ನಿಲ್ಲಿಸುವುದು ಸುಲಭದ ಮಾತಲ್ಲ. ಆದರೆ ವಿಂಗ್ಡ್ ಮೈಗ್ರೇಶನ್ನಲ್ಲಿ ಇದು ಸಾಧ್ಯವಾಗಲು ಕಾರಣ, ಹಕ್ಕಿಗಳ ಹಾರುವಿಕೆಯೊಡನೆ ಹಿನ್ನೆಲೆ ದೃಶ್ಯಗಳನ್ನು ಕಟ್ಟಿ ಕೊಟ್ಟಿರುವ ಪರಿ. ಸುಂದರ ಪ್ರಕೃತಿಯ ಅಗಾಧ ರಸರುಚಿಯ ಸಿಹಿ ಸ್ವಾನುಭವ ತೀರಾ ಸುಲಭವಾಗಿ ಬೇಕೆಂದರೆ ಮತ್ತೆ ಪರಿಹಾರ ವಿಂಗ್ಡ್ ಮೈಗ್ರೇಶನ್! ಚಿತ್ರ ನೋಡುತ್ತಲೇ ನೀವು ಪ್ರಪಂಚ ಪ್ರವಾಸ ಮುಗಿಸಲೂ ಬಹುದು! ಭಾರತದ ಹಿಮಾಲಯ ಪರ್ವತಗಳು, ಪೂರ್ವ ಯುರೋಪಿನ ಕೊಳಕು ಕೈಗಾರಿಕಾ ಜಿಲ್ಲೆಗಳು, ಸಹರಾ ಮರುಭೂಮಿ, ಮರುಭೂಮಿಯ ನಡುವಿನ ಸುಂದರ ಓಯಾಸಿಸ್‌ಗಳು, ಅಂಟಾರ್ಟಿಕಾದ ಹಿಮಾವೃತ ಪ್ರದೇಶಗಳು ಹೀಗೆ.

ಸಾವಿರಾರು ಕಿಲೋ ಮೀಟರ್‌ಗಳಾಚೆಗಿನ ನಿಖರ ಪ್ರದೇಶಕ್ಕೆ ಪ್ರತೀ ವರ್ಷ ವಲಸೆ ಹೋಗುವ ಹಕ್ಕಿಗಳ ವರ್ತನೆ ನಮಗೆಲ್ಲಾ ಅಚ್ಚರಿಯೆನಿಸಿದ್ದು ತೀರಾ ಇತ್ತೀಚೆಗೇನಲ್ಲ. ಪ್ರತಿ ಚಳಿಗಾಲದಲ್ಲಿ ನಿಯಮಿತವಾದ ಹಾದಿ(?)ಯಲ್ಲಿ ಪ್ರಪಂಚವನ್ನೆಲ್ಲಾ ಸುತ್ತುವ ಹಕ್ಕಿಗಳ ಕುರಿತು ನಮಗೆ ೮೦ ಮಿಲಿಯನ್ ವರ್ಷಗಳ ಇತಿಹಾಸ ದಕ್ಕಿದೆ. ಹಕ್ಕಿಗಳ ನಿಖರ ಹಾಗೂ ನಿರಂತರ ಪಯಣ, ಕೌತುಕದ ಪ್ರಸಂಗವೆನಿಸಿದಾರಭ್ಯ ಆ ಬಗೆಗಿನ ಸಂಶೋಧನೆ ನಡೆದೇ ಇತ್ತು.
     ಈ ನಿಟ್ಟಿನಲ್ಲಿ ಆರಂಭವಾದ ಸಂಶೋಧನೆಗಳು ಒತ್ತಟ್ಟಿಗಿರಲಿ. ಸಾವಿರಾರು ಮೈಲು ಹಾರುವ ಹಕ್ಕಿಗಳ ಜಾಡನ್ನು ಹಿಡಿದು ಹೊರಟರೆ ಎಂಥ ಅದ್ಭುತ ಸೃಷ್ಟಿ ಕಣ್ಣೆದುರು ಬಿಚ್ಚಿಕೊಳ್ಳಬಹುದು? ಜ್ಯಾಕಸ್ ಪೆರಿನ್ ತಡ ಮಾಡಲಿಲ್ಲ. ತಾವೇ ಬರೆದು ಹಣ ತೊಡಗಿಸಿ, ನಿರ್ದೇಶನವನ್ನೂ ಮಾಡ ಹೊರಟರು. ಮೈಕೆಲ್ ಡಿಬ್ಯಾಟ್ಸ್, ಗೈ ಜೆರ್ರಿ, ಪ್ರಾನ್ಸಿಸ್ ರಾಕ್ಸ್, ಜ್ಯಾಕಸ್ ಕ್ಲುಜೌದ್, ಕ್ರಿಸ್ಟೋಪ್ ಬರಾಟಿಯರ್, ಜೀನ್ ಡಾಸ್ರ್ಟ್, ಸ್ಟೀಫನ್ ಡುರಾನ್ ರ ಸಹಕಾರವೂ ಸಿಕ್ಕಿತು.
ಆಗ ಅವರ ಜೊತೆಗೂಡಿಸಿಕೊಂಡಿದ್ದು ಹದಿನೇಳು ಪೈಲಟ್‌ಗಳು, ೧೪ ಛಾಯಾಗ್ರಾಹಕರನ್ನೊಳಗೊಂಡ ನಾನೂರೈವತ್ತಕ್ಕೂ ಹೆಚ್ಚಿನ ಜನರಿದ್ದ ಐದು ತಂಡಗಳನ್ನು. ನಾಲ್ಕು ವರ್ಷಗಳ ಕಾಲ ಉತ್ತರ, ದಕ್ಷಿಣಾರ್ಧಗಳಲ್ಲಿ, ಸಾಗರ ಸಮುದ್ರಗಳಲ್ಲಿ, ಏಳು ಖಂಡಗಳಲ್ಲಿ, ಒಟ್ಟೂ ನಲವತ್ತು ದೇಶಗಳಲ್ಲಿ ಹಕ್ಕಿಗಳನ್ನು ಹಿಂಬಾಲಿಸಿದವು, ಈ ತಂಡಗಳು. ಪ್ಯಾರಿಸ್‌ನ ಐಫೆಲ್ ಟವರ್‌ನಿಂದ ಮೊದಲ್ಗೊಂಡು ದುರ್ದರ  ಅಮೇಜಾನ್, ಆರ್ಕ್ಟಿಕ್‌ವರೆಗೂ ಹೋಗಿ ಬಂದರು. ವಿಮಾನಗಳು, ಗ್ಲೈಡರ್‌ಗಳು, ಬಲೂನ್‌ಗಳು, ಹೆಲಿಕ್ಯಾಪ್ಟರ್‌ಗಳು, ಅನೇಕ ಅತ್ಯಾಧುನಿಕ ಉಪಕರಣಗಳು, ಅದ್ಭುತ ಶಕ್ತಿಯ ಕ್ಯಾಮರಾಗಳು ಬಳಕೆಯಾದವು. ಇವೆಲ್ಲವುಗಳ ಒಟ್ಟೂ ಪರಿಣಾಮವೇ ಮಾನವನ ಕಣ್ಣೆದುರು ಹಕ್ಕಿಗಳ ವಿಸ್ಮಯ ಜಗತ್ತೊಂದರ ಅನಾವರಣ. ನಾಲ್ಕು ವರ್ಷಗಳ ಸತತ ಶ್ರಮ ಈ ತಂಡಕ್ಕೆ ಕಿಂಚಿತ್ತೂ ಬೇಸರ ತಂದಿರಲಿಲ್ಲವೆಂಬುದನ್ನು ಚಿತ್ರ ನೋಡಿದ ಯಾರಾದರೂ ಹೇಳಬಹುದು. ಇದಕ್ಕೆ ವಿಂಗ್ಡ್ ಮೈಗ್ರೇಶನ್ ತಂಡದ ಪ್ರತಿಯೊಬ್ಬರಲ್ಲೂ ಏನಾದರೊಂದು ಸಾಧಿಸಬೇಕೆಂಬ ಅದಕ್ಕಿಂತ ಹೆಚ್ಚಾಗಿ ವಿಸ್ಮಯ ಘಟನೆಗಳನ್ನು ಸೆರೆ ಹಿಡಿದು ನಾಗರಿಕ ಜಗತ್ತಿನ ಮುಂದಿಡಬೇಕೆಂಬ ಕಳಕಳಿ, ತುಡಿತ ಕಾರಣವಿರಬಹುದು. ಏನೇ ಇರಲಿ ಪಕ್ಷಿಗಳ ಪರಿಧಿಯೊಳಗೆ ನುಗ್ಗಿ ಬರುವ ಮನಸ್ಸಿದ್ದರೆ ಸೂಕ್ತ ಆಯ್ಕೆ ವಿಂಗ್ಡ್ ಮೈಗ್ರೇಶನ್.

ಸುಗಂಧ                                   
          
 

ದಿನದರ್ಶಿ

ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

ಅನುಭವಿಸಿದವರು

  • 2,615 ಅನುಭಾವಿಗಳು