You are currently browsing the tag archive for the ‘film’ tag.
ಇಲ್ಲಿ ಅಚ್ಚು ಕಟ್ಟಾದ ಅಭಿನಯ ನೀಡಿ ಮನಸೂರೆಗೊಳ್ಳುವ ಪಾತ್ರಧಾರಿಗಳು ಪಕ್ಷಿಗಳು! ಪಕ್ಷಿಗಳಿಂದ ಶುರುವಾಗಿ ಅವುಗಳಿಂದಲೇ ಮುಂದುವರೆದು, ಮುಗಿಯುವ ಚಿತ್ರದಲ್ಲಿ ಕಥೆ ಗೌಣವಾಗಿಬಿಡುತ್ತದೆ. ೯೮ ನಿಮಿಷದ ಚಿತ್ರದ ಪ್ರತೀ ಫ್ರೇಂಗಳೂ ಅದ್ಭುತ ಕಾದಂಬರಿಗಳಾಗಿಬಿಡುತ್ತವೆ! ಹೀಗೆ, ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ? ಎಂಬ ಸಾಲುಗಳನ್ನು ನೆನಪಿಸುತ್ತಾ ಹಕ್ಕಿಗಳ ಹಾರುವಿಕೆಯೊಂದಿಗೇ ನಮ್ಮನ್ನು ಧ್ಯಾನಸ್ಥಿಥಿಗೊಯ್ಯುವ ಚಿತ್ರವೇ ವಿಂಗ್ಡ್ ಮೈಗ್ರೇಶನ್!
ಅನುಭವಕ್ಕಿಂತ ಕಥೆ ಮುಖ್ಯವೆನಿಸಿದಲ್ಲಿ ಈ ಸಿನಿಮಾ ನಿಮಗಲ್ಲ! ಸಿನಿಮಾ ಸೀಮೆಯ ಸಿದ್ಧಾಂತಗಳ ಚೌಕಟ್ಟನ್ನು ಮೀರಿ ನಿಂತ ಈ ಚಿತ್ರದಲ್ಲಿ ಸಂಭಾಷಣೆಗಳೆಂಬ ಆಡಂಬರವಿಲ್ಲ. ಚಿತ್ರಕ್ಕೆ ಅದು ಅಗತ್ಯ ಅಂತನ್ನಿಸುವುದೂ ಇಲ್ಲ! ಚಿತ್ರದುದ್ದಕ್ಕೂ ತಡವರಿಸುತ್ತಾ ನೀಡುವ ವಿವರಣೆ ಕಿರಿ ಕಿರಿಯೆನ್ನಿಸಬಹುದು. ಹಾಗಾದಲ್ಲಿ ಸಬ್ ಟೈಟಲ್ ನೋಡಿ ಮಾಹಿತಿಗಳ ಕಟ್ಟು ಕಟ್ಟಬಹುದು. ಉಳಿದಂತೆ ಇಲ್ಲಿರುವುದು ನಿಸರ್ಗದ ಭಾಷೆಗೆ ಕಿವಿಯಾನಿಸುವವನಿಗೆ ಮಾತ್ರ ಅರ್ಥವಾಗಬಹುದಾದ ಹಕ್ಕಿಗಳ ಕಲರವ ಮತ್ತು ಚಿತ್ರದುದ್ದಕ್ಕೂ ಕಣ್ಣಿಗೆ ಹೋಲಿ! ಪ್ರೇಕ್ಷಕನಿಗೆ ನಗಿಸುವ, ಖುಷಿ ಪಡಿಸುವ, ನಾಚಿಕೆಯಿಂದ ಮುರುಟಿ ಹೋಗುವಂತೆ ಮಾಡುವ, ಕುರ್ಚಿಯಂಚಿಗೆ ತಂದು ಕೂರಿಸುವ, ಕೆಲವೊಮ್ಮೆ ಕಣ್ಣಂಚನ್ನು ತೇವಗೊಳಿಸುವ ಕಾರ್ಯದೊಂದಿಗೆ ಹಕ್ಕಿಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ. ಒಂದರ್ಥದಲ್ಲಿ ಈ ಚಿತ್ರ ನಿರ್ಮಿಸಿದ್ದು ಹಕ್ಕಿಗಳಿಗಾಗಿಯೇ ಎನ್ನಲಡ್ಡಿಯಿಲ್ಲ.
೯೮ ನಿಮಿಷಗಳ ಕಾಲ ಕೇವಲ ಹಕ್ಕಿಯ ಹಾರುವಿಕೆಯೊಂದನ್ನೇ ತೋರಿಸುತ್ತಾ ವೀಕ್ಷಕನ ಚಿತ್ತವನ್ನು ಚಿತ್ರದಿಂದಾಚೆ ಸರಿಯದಂತೆ ತಡೆದು ನಿಲ್ಲಿಸುವುದು ಸುಲಭದ ಮಾತಲ್ಲ. ಆದರೆ ವಿಂಗ್ಡ್ ಮೈಗ್ರೇಶನ್ನಲ್ಲಿ ಇದು ಸಾಧ್ಯವಾಗಲು ಕಾರಣ, ಹಕ್ಕಿಗಳ ಹಾರುವಿಕೆಯೊಡನೆ ಹಿನ್ನೆಲೆ ದೃಶ್ಯಗಳನ್ನು ಕಟ್ಟಿ ಕೊಟ್ಟಿರುವ ಪರಿ. ಸುಂದರ ಪ್ರಕೃತಿಯ ಅಗಾಧ ರಸರುಚಿಯ ಸಿಹಿ ಸ್ವಾನುಭವ ತೀರಾ ಸುಲಭವಾಗಿ ಬೇಕೆಂದರೆ ಮತ್ತೆ ಪರಿಹಾರ ವಿಂಗ್ಡ್ ಮೈಗ್ರೇಶನ್! ಚಿತ್ರ ನೋಡುತ್ತಲೇ ನೀವು ಪ್ರಪಂಚ ಪ್ರವಾಸ ಮುಗಿಸಲೂ ಬಹುದು! ಭಾರತದ ಹಿಮಾಲಯ ಪರ್ವತಗಳು, ಪೂರ್ವ ಯುರೋಪಿನ ಕೊಳಕು ಕೈಗಾರಿಕಾ ಜಿಲ್ಲೆಗಳು, ಸಹರಾ ಮರುಭೂಮಿ, ಮರುಭೂಮಿಯ ನಡುವಿನ ಸುಂದರ ಓಯಾಸಿಸ್‌ಗಳು, ಅಂಟಾರ್ಟಿಕಾದ ಹಿಮಾವೃತ ಪ್ರದೇಶಗಳು ಹೀಗೆ.
ಸಾವಿರಾರು ಕಿಲೋ ಮೀಟರ್‌ಗಳಾಚೆಗಿನ ನಿಖರ ಪ್ರದೇಶಕ್ಕೆ ಪ್ರತೀ ವರ್ಷ ವಲಸೆ ಹೋಗುವ ಹಕ್ಕಿಗಳ ವರ್ತನೆ ನಮಗೆಲ್ಲಾ ಅಚ್ಚರಿಯೆನಿಸಿದ್ದು ತೀರಾ ಇತ್ತೀಚೆಗೇನಲ್ಲ. ಪ್ರತಿ ಚಳಿಗಾಲದಲ್ಲಿ ನಿಯಮಿತವಾದ ಹಾದಿ(?)ಯಲ್ಲಿ ಪ್ರಪಂಚವನ್ನೆಲ್ಲಾ ಸುತ್ತುವ ಹಕ್ಕಿಗಳ ಕುರಿತು ನಮಗೆ ೮೦ ಮಿಲಿಯನ್ ವರ್ಷಗಳ ಇತಿಹಾಸ ದಕ್ಕಿದೆ. ಹಕ್ಕಿಗಳ ನಿಖರ ಹಾಗೂ ನಿರಂತರ ಪಯಣ, ಕೌತುಕದ ಪ್ರಸಂಗವೆನಿಸಿದಾರಭ್ಯ ಆ ಬಗೆಗಿನ ಸಂಶೋಧನೆ ನಡೆದೇ ಇತ್ತು.
ಈ ನಿಟ್ಟಿನಲ್ಲಿ ಆರಂಭವಾದ ಸಂಶೋಧನೆಗಳು ಒತ್ತಟ್ಟಿಗಿರಲಿ. ಸಾವಿರಾರು ಮೈಲು ಹಾರುವ ಹಕ್ಕಿಗಳ ಜಾಡನ್ನು ಹಿಡಿದು ಹೊರಟರೆ ಎಂಥ ಅದ್ಭುತ ಸೃಷ್ಟಿ ಕಣ್ಣೆದುರು ಬಿಚ್ಚಿಕೊಳ್ಳಬಹುದು? ಜ್ಯಾಕಸ್ ಪೆರಿನ್ ತಡ ಮಾಡಲಿಲ್ಲ. ತಾವೇ ಬರೆದು ಹಣ ತೊಡಗಿಸಿ, ನಿರ್ದೇಶನವನ್ನೂ ಮಾಡ ಹೊರಟರು. ಮೈಕೆಲ್ ಡಿಬ್ಯಾಟ್ಸ್, ಗೈ ಜೆರ್ರಿ, ಪ್ರಾನ್ಸಿಸ್ ರಾಕ್ಸ್, ಜ್ಯಾಕಸ್ ಕ್ಲುಜೌದ್, ಕ್ರಿಸ್ಟೋಪ್ ಬರಾಟಿಯರ್, ಜೀನ್ ಡಾಸ್ರ್ಟ್, ಸ್ಟೀಫನ್ ಡುರಾನ್ ರ ಸಹಕಾರವೂ ಸಿಕ್ಕಿತು.
ಆಗ ಅವರ ಜೊತೆಗೂಡಿಸಿಕೊಂಡಿದ್ದು ಹದಿನೇಳು ಪೈಲಟ್‌ಗಳು, ೧೪ ಛಾಯಾಗ್ರಾಹಕರನ್ನೊಳಗೊಂಡ ನಾನೂರೈವತ್ತಕ್ಕೂ ಹೆಚ್ಚಿನ ಜನರಿದ್ದ ಐದು ತಂಡಗಳನ್ನು. ನಾಲ್ಕು ವರ್ಷಗಳ ಕಾಲ ಉತ್ತರ, ದಕ್ಷಿಣಾರ್ಧಗಳಲ್ಲಿ, ಸಾಗರ ಸಮುದ್ರಗಳಲ್ಲಿ, ಏಳು ಖಂಡಗಳಲ್ಲಿ, ಒಟ್ಟೂ ನಲವತ್ತು ದೇಶಗಳಲ್ಲಿ ಹಕ್ಕಿಗಳನ್ನು ಹಿಂಬಾಲಿಸಿದವು, ಈ ತಂಡಗಳು. ಪ್ಯಾರಿಸ್‌ನ ಐಫೆಲ್ ಟವರ್‌ನಿಂದ ಮೊದಲ್ಗೊಂಡು ದುರ್ದರ ಅಮೇಜಾನ್, ಆರ್ಕ್ಟಿಕ್‌ವರೆಗೂ ಹೋಗಿ ಬಂದರು. ವಿಮಾನಗಳು, ಗ್ಲೈಡರ್‌ಗಳು, ಬಲೂನ್‌ಗಳು, ಹೆಲಿಕ್ಯಾಪ್ಟರ್‌ಗಳು, ಅನೇಕ ಅತ್ಯಾಧುನಿಕ ಉಪಕರಣಗಳು, ಅದ್ಭುತ ಶಕ್ತಿಯ ಕ್ಯಾಮರಾಗಳು ಬಳಕೆಯಾದವು. ಇವೆಲ್ಲವುಗಳ ಒಟ್ಟೂ ಪರಿಣಾಮವೇ ಮಾನವನ ಕಣ್ಣೆದುರು ಹಕ್ಕಿಗಳ ವಿಸ್ಮಯ ಜಗತ್ತೊಂದರ ಅನಾವರಣ. ನಾಲ್ಕು ವರ್ಷಗಳ ಸತತ ಶ್ರಮ ಈ ತಂಡಕ್ಕೆ ಕಿಂಚಿತ್ತೂ ಬೇಸರ ತಂದಿರಲಿಲ್ಲವೆಂಬುದನ್ನು ಚಿತ್ರ ನೋಡಿದ ಯಾರಾದರೂ ಹೇಳಬಹುದು. ಇದಕ್ಕೆ ವಿಂಗ್ಡ್ ಮೈಗ್ರೇಶನ್ ತಂಡದ ಪ್ರತಿಯೊಬ್ಬರಲ್ಲೂ ಏನಾದರೊಂದು ಸಾಧಿಸಬೇಕೆಂಬ ಅದಕ್ಕಿಂತ ಹೆಚ್ಚಾಗಿ ವಿಸ್ಮಯ ಘಟನೆಗಳನ್ನು ಸೆರೆ ಹಿಡಿದು ನಾಗರಿಕ ಜಗತ್ತಿನ ಮುಂದಿಡಬೇಕೆಂಬ ಕಳಕಳಿ, ತುಡಿತ ಕಾರಣವಿರಬಹುದು. ಏನೇ ಇರಲಿ ಪಕ್ಷಿಗಳ ಪರಿಧಿಯೊಳಗೆ ನುಗ್ಗಿ ಬರುವ ಮನಸ್ಸಿದ್ದರೆ ಸೂಕ್ತ ಆಯ್ಕೆ ವಿಂಗ್ಡ್ ಮೈಗ್ರೇಶನ್.
ಸುಗಂಧ
ಪರಿಮಳಿಸಿದ ಬಗೆ