You are currently browsing the category archive for the ‘ಸಂದರ್ಶನ’ category.

ಅರಳುವಿಕೆ. ಸಹಜತೆಗೆ ಇರುವ ಉಪಮೆ. ರಾಗವೂ ಹೀಗೆಯೇ ಅರಳಬೇಕಂತೆ ; ಪೂರ್ಣತ್ವಕ್ಕಾಗಿ. 
“ಅಕ್ಕ ಕೇಳವ್ವಾ ನಾನೊಂದು ಕನಸ ಕಂಡೆ’ ಅಕ್ಕಮಹಾದೇವಿಯ ವಚನ ಕೇಳಿದ ಕೂಡಲೇ ಜೈಪುರ್ ಅಟ್ರೌಲಿ ಘರಾನಾದ ಖ್ಯಾತಿ ಮಲ್ಲಿಕಾರ್ಜುನ ಮನ್ಸೂರ್ ಸ್ಮೃತಿ ಪಟಲದಲ್ಲಿ ಬಂದು ಹಾಡಲು ಆರಂಭಿಸುತ್ತಾರೆ. ವಚನ ಮತ್ತು ಸಂಗೀತ-ಎರಡಕ್ಕೂ ಏಕಕಾಲದಲ್ಲಿ ಒಂದು ತಾದಾತ್ಮ್ಯವನ್ನು ಬೆಸೆದ ಪ್ರಯತ್ನವಿದು. ಮನ್ಸೂರ್, ಸಂಗೀತಕ್ಕೆ ತಮ್ಮ ಬದುಕನ್ನೇ ತೇಯ್ದುಕೊಂಡವರು, ಗಂಧದಂತೆ. ಪರಿಮಳ ಹೊಮ್ಮಿ ನಾಡಿನ ಪ್ರತಿ ಮನೆಯ ಕಂಪೂ ಅವರೇ ಆದಾಗಲೂ ಮನ್ಸೂರರ ಮುಖದಲ್ಲಿ ಆ ಚೆಂದದ ಪೂರ್ಣತ್ವದ ನಗೆ ಮಾಸಿರಲಿಲ್ಲ. ಅವರೋ ಶಿಖರ, ಅವರ ಸಾಧನೆ ಆ ಶಿಖರಕ್ಕೆ ಮುಕುಟಪ್ರಾಯ.
ಇದೇ ಜೈಪುರ್ ಅಟ್ರೌಲಿ ಘರಾನಾವನ್ನು ಅಷ್ಟೇ ಸಮರ್ಥವಾಗಿ ತಮ್ಮದಾಗಿಸಿಕೊಂಡಿರುವ ಮನ್ಸೂರರ ಪುತ್ರ ರಾಜಶೇಖರ ಮನ್ಸೂರ್ ಇಲ್ಲಿ ಉಲ್ಲೇಖನೀಯರು. ರಾಜಶೇಖರ್ ಮನ್ಸೂರ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಪಾಠ ಮಾಡಿದವರು. ಪ್ರವೃತ್ತಿಯಲ್ಲಿ ಸಂಗೀತಗಾರ. ವೃತ್ತಿಗೆ ಕೊಟ್ಟಷ್ಟೇ ಆದ್ಯತೆಯನ್ನು ಪ್ರವೃತ್ತಿಗೂ ನೀಡಿರುವುದು ಧನಾತ್ಮಕ ಅಂಶ.
ಪರಂಪರೆಯನ್ನು ತನ್ನ ಪ್ರಯೋಗದ ಕುಲುಮೆಯ ಬಂಡವಾಳವನ್ನಾಗಿಸಿ ಹೊಸತನದಿಂದ ಹಾಡುವ ರಾಜಶೇಖರ ಮನ್ಸೂರರ ಬಗ್ಗೆ ಎರಡು ಮಾತು ಹೇಳಬೇಕು. ಷಷ್ಟ್ಯಾಬ್ದಿಯ ಸಂಭ್ರಮದಲ್ಲಿರುವ ಇವರು ದಕ್ಷಿಣ ಕರ್ನಾಟಕಕ್ಕೆ ಪರಿಚಿತರಾಗಿಯೂ ಅಪರಿಚಿತರಾಗಿರುವವರು. ಆದರೆ ಉತ್ತರ ಭಾರತಕ್ಕೆ ಅಪರಿಚಿತರಾಗಿಯೂ ತೀರಾ ಪರಿಚಿತರಾಗಿರುವವರು. ಒಂದು ಕಡೆ ಹಿತ್ತಲ ಮದ್ದಾದವರು ; ಮತ್ತೊಂದು ಕಡೆ ಪ್ರತಿಭೆಯಿಂದಲೇ ಮಾನ್ಯರಾದವರು.
ಸಜ್ಜನರು-ಸೌಜನ್ಯ-ಸಜ್ಜನಿಕೆ ಎಂದು ಹೇಳುವುದು ತೀರಾ ಕ್ಲೀಷೆ ಎನಿಸಿಬಿಟ್ಟಿದೆ.  ಆದರೆ ಬಹಳ ಸಹಜವಾಗಿ ಮಾನವೀಯ ವಾಗಿ ಪ್ರತಿಕ್ರಿಯಿಸುವ ರಾಜಶೇಖರ ಮನ್ಸೂರರರಿಗೆ ನಿಷ್ಠುರವಾಗಿ, ತಿಳಿಯದಿದ್ದನ್ನು “ಗೊತ್ತಿಲ್ಲ’ ಎಂದು ಹೇಳುವ ತಿಳಿವಿದೆ.
ಇಪ್ಪತ್ತು ವರ್ಷ ತಂದೆಯಲ್ಲಿ ತರಬೇತಿ ಪಡೆದ ರಾಜಶೇಖರ ನಂತರ ಕಳೆದ ೨೫ ವರ್ಷಗಳಲ್ಲಿ ಹಲವು ರಾಗಗಳ ಮೂಲ ಸತ್ವವನ್ನೇ ಅರಿತುಕೊಳ್ಳುವತ್ತ ಪ್ರಯತ್ನಿಸಿದ್ದಾರೆ. “ಇನ್ನೂ ಕಲಿಯುತ್ತಿದ್ದೇನೆ, ಸಂಗೀತದ ಎಲ್ಲವೂ ಅರ್ಥವಾಗಿಲ್ಲ. ಇನ್ನೂ ಅರಿತು ಕೊಳ್ಳುವ ಕ್ರಿಯೆ ಸಾಗಿದೆ. ಪೂರ್ಣ ಅರಿತಿಲ್ಲ’ ಎಂದು ಹೇಳುತ್ತಾರೆ. ಸಂದರ್ಶನದ ಉಳಿದ ಭಾಗ ಇಂತಿದೆ :
* ಕಛೇರಿಗಳು ಹೇಗೆ ಸಾಗಿವೆ? ಕರ್ನಾಟಕದಲ್ಲೇ ನಿಮ್ಮ ಪರಿಚಯ ಇನ್ನೂ ಆಗಿಲ್ವೇ?
ಉತ್ತರ ಭಾರತದಲ್ಲಿ ಬಹಳ ಕಾರ್ಯಕ್ರಮ ನೀಡಿದ್ದೇನೆ. ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಅಹಮದಾಬಾದ್ ಇತ್ಯಾದಿ. ಇತ್ತೀಚಿನ ಕೋಮುಗಲಭೆ ಸಂದರ್ಭದಲ್ಲೂ ಕಾರ್ಯಕ್ರಮ ನೀಡಿದ್ದು ವಿಶೇಷವೆನಿಸಿದೆ. ಕರ್ನಾಟಕದಲ್ಲಿ ಧಾರವಾಡ, ಹುಬ್ಬಳ್ಳಿಯಲ್ಲಿ ಪರಿಚಯವಾಗಿದ್ದೇನೆ. ದಕ್ಷಿಣ ಕರ್ನಾಟಕದಲ್ಲಿ ಬೇಡಿಕೆಯಿಲ್ಲ. ನನಗೂ ಕಾರಣ ಗೊತ್ತಿಲ್ಲ ; ಆ ಬಗ್ಗೆ ಚಿಂತೆನೂ ಮಾಡಿಲ್ಲ. ಉತ್ತರ ಭಾರತದಲ್ಲಿ ಹೆಸರು ಮಾಡಿದ್ದರೂ ನನ್ನ ತಂದೆಯೂ ಅರವತ್ತರ ನಂತರವೇ ಕರ್ನಾಟಕದಲ್ಲಿ ಪ್ರಸಿದ್ಧಿಗೆ ಬಂದವರು.
* ಹಾಗಾದರೆ ಈಗ ನಿಮಗೂ ಅರವತ್ತು ಆಯಿತಲ್ಲ, ಪ್ರಸಿದ್ಧಿಗೆ ಬರುವಿರಾ?
ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾರೆ. ನನ್ನಷ್ಟಕ್ಕೇ ಹಾಡುವುದಷ್ಟೇ ಕೆಲಸ.  ಇದೇನೂ ಕೊರತೆ ಎನ್ನಿಸುತ್ತಿಲ್ಲ.
* ಒಂದು ಸಂಗೀತ ಕಛೇರಿಯನ್ನು ವ್ಯಾಖ್ಯಾನಿಸಿ..
ಪ್ರತಿ ಕಛೇರಿಗೂ ಬಹಳ ಮುಕ್ತ ಮನಸ್ಸಿನಿಂದ ಸಾಗುತ್ತೇನೆ. ಸಾಧಾರಣವಾಗಿ ರಾಗಗಳನ್ನು ನಿಗದಿಪಡಿಸಿಕೊಂಡು ಅಭ್ಯಾಸಮಾಡಿ ಹೋಗುವುದಿಲ್ಲ. ನನ್ನ ಗುರುವೂ ಹೇಳಿದಂತೆ ಆ ದಿನದ “ಮೂಡ್’ ಮೇಲೆ ರಾಗಗಳನ್ನು ಪ್ರಸ್ತುತಪಡಿಸುತ್ತೇನೆ. ಉತ್ತರ ಭಾರತದಲ್ಲಿ “ಫರಮಾಹಿಶ್’ ಇರುತ್ತೆ. ಸಂಗೀತ ಪ್ರೇಮಿಗಳು ಇಂತಹ ರಾಗ ಹಾಡಿ ಎಂದು ಕೋರುತ್ತಾರೆ. ಅಂತಹವುಗಳಿಗೆ ಮನ್ನಣೆ ನೀಡುತ್ತೇನೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಹಾಡದಿದ್ದರೆ ಸರಿ ಎನಿಸುವುದಿಲ್ಲ. ಜನಪ್ರಿಯತೆಗಾಗಿ ನಾನು ಹಾಡೋದಿಲ್ಲ.
* ತಂದೆಯಂತೆ ವಚನ ಹಾಡಲಿಕ್ಕೆ ಏಕೆ ಪ್ರಯತ್ನಿಸಿಲ್ಲ?
ಇಲ್ಲ, ಹಾಗೇನೂ ನಿರ್ಬಂಧವಿಲ್ಲ. ವಚನವನ್ನೂ ಹಾಡುತ್ತೇನೆ. ಆದರೆ ನಾನು “ಖ್ಯಾಲ್’ ಗೆ ಅರ್ಪಿಸಿಕೊಂಡುಬಿಟ್ಟಿದ್ದೇನೆ. ಅದನ್ನೇ ಇನ್ನಷ್ಟು ಇನ್ನಷ್ಟು ಅಂತರ್ಗತಗೊಳಿಸಿಕೊಳ್ಳುವುದು ನನ್ನ ಸಾಧನೆಯ ಹಾದಿ. ಅದರಲ್ಲೇ ಪರಿಪೂರ್ಣನಾಗಬೇಕೆಂಬ ಇಚ್ಛೆಯೂ ನನ್ನದು. ಹಾಗಾಗಿ ಅದರಲ್ಲೇ ತಲ್ಲೀನನಾಗಿದ್ದೇನೆ. ಆದರೆ ಹಾಡಬಾರದೆಂಬುದಾಗಲೀ ಅಥವಾ ಶಾಸ್ತ್ರೀಯ ಗಾಯಕರು ವಚನ, ದಾಸರ ಪದ ಹಾಡುವುದು ತಪ್ಪು ಎಂಬ ಅಭಿಪ್ರಾಯವಾಗಲೀ ನನ್ನದಲ್ಲ.
* ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೃತಿಗಳನ್ನು ಪರಿಚಯಿಸದಿದ್ದರೆ ಕನ್ನಡಕ್ಕೇ ಕೊರತೆ ಅಲ್ಲವೇ?
ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ. ಶಾಸ್ತ್ರೀಯ ಮಟ್ಟುಗಳಿಂದ ಕೂಡಿದ ಶಾಸ್ತ್ರೋಕ್ತ ರಚನೆ(ಬಂದಿಶ್)ಗಳನ್ನು ಉತ್ತರ ಭಾರತದ ಗಾಯಕರೇ ಕಟ್ಟಿಕೊಟ್ಟಿದ್ದಾರೆ. ಅಂತಹ ರಚನೆ ನಮ್ಮಲ್ಲಿ ಇಲ್ಲ. ಸಂಗೀತ ದೃಷ್ಟಿಕೋನಕ್ಕೆ ಹೊಂದುವಂತಿರಬೇಕು. ಅಂತಹ ರಚನೆಗಳೂ ಕನ್ನಡದಲ್ಲೂ ಸಿಕ್ಕರೆ ನಾನು ಖಂಡಿತಾ ಹಾಡುತ್ತೇನೆ. ಕವಿ ಹೃದಯಿಗಳು ಸಂಗೀತದ ಅಗತ್ಯವನ್ನೂ ಅರಿತು ರಚಿಸಿದರೆ ಅತ್ಯಂತ ಸೂಕ್ತ. ಅಂತಹವು ರಚನೆಯಾದರೆ ಮೊದಲು ಖುಷಿ ಪಡುವವನೇ ನಾನು.
* ಸಂಗೀತಗಾರರು, ಸಾಹಿತಿಗಳು, ಕಲಾವಿದರೆಲ್ಲಾ ಸಾಮಾಜಿಕ ಸಂದರ್ಭಗಳಿಂದ(ಸಾಮಾಜಿಕ ತಲ್ಲಣ ಇತ್ಯಾದಿ) ಹೊರ ಬರುವುದಿಲ್ಲ ಏಕೆ? ದಂತಗೋಪುರದಲ್ಲೇ ಯಾಕೆ ಉಳಿಯುತ್ತಾರೆ?
ಸಾಮಾಜಿಕ ಸಂದರ್ಭಗಳಿಗೆ ಎಲ್ಲರೂ ಪ್ರತಿಕ್ರಿಯಿಸಬೇಕು. ಸಮಾಜದೊಳಗೆ ಬದುಕುವುದರಿಂದ ಅಲ್ಲಿನ ತಲ್ಲಣಗಳಿಗೆ ಸ್ಪಂದಿಸದಿದ್ದರೆ ಕಷ್ಟ. ನನಗೆ ತಿಳಿದಂತೆ ಹಲವು ಸನ್ನಿವೇಶಗಳಲ್ಲಿ ಕೆಲವರು ಸ್ಪಂದಿಸಿದ್ದಾರೆ. ಆದರೆ ಅವರ ಪ್ರಮಾಣ ಕಡಿಮೆ ಇರುವುದು ನಿಜ. ಸಮಾಜವೇ ಅವನಿಗೆ ಮಾನ್ಯತೆ ನೀಡುವಾಗ ಅದರ ಸಂದರ್ಭಗಳಿಗೆ ಪ್ರತಿಕ್ರಿಯಿಸದಿದ್ದರೆ ತಪ್ಪು. ಇದು ನನ್ನ ನಿಲುವು.
* ಪ್ರಜ್ಞಾವಂತಿಕೆ ಸಂಗೀತ ಆಸ್ವಾದನೆಗೆ ಧಕ್ಕೆಯಾಗುತ್ತಾ?
ಒಂದು ಅರ್ಥದಲ್ಲಿ ಈ ಮಾತು ನಿಜ. ಪ್ರಜ್ಞಾವಂತಿಕೆ ಬಳಕೆಯ ಔಚಿತ್ಯ ಅರಿವಿರಬೇಕು. ನಾನು ಸಂಗೀತ ಕಲಿದ್ದು ವಿಶ್ಲೇಷಣೆಗಳ ಮೂಲಕವಲ್ಲ. ನನ್ನ ತಂದೆ ರಾಗಗಳೊಳಗೆ ಹೋಗಿ ಹಾಡುತ್ತಿದ್ದರಲ್ಲ. ಅದೇ ಅಚ್ಚರಿ ಎನಿಸುತ್ತಿತ್ತು. ಅವರೇ ರಾಗವನ್ನು ಸೃಷ್ಟಿಸುತ್ತಿದ್ದರು ಎನಿಸುತ್ತಿತ್ತು ನನಗೆ. ನನ್ನ ನೆಲೆಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗಿದ್ದೇನೆ. ವಿದ್ವತ್, ತಂತ್ರಗಳ ಬಗ್ಗೆ ಸ್ವರ ಹಚ್ಚುವಾಗಲೂ ಗಮನ ಕೊಡುವವರನ್ನು ನೋಡಿದ್ದೇನೆ. ಆದರೆ ಅಲ್ಲಿ ಹುಟ್ಟುವ ಆನಂದವನ್ನು ಅನುಭವಿಸುವುದು ತಿಳಿದಿರುವುದಿಲ್ಲ.
ಸಂಗೀತವೇ ಸುಂದರ. ಅದನ್ನು ಸುಂದರಗೊಳಿಸಲಿಕ್ಕೆ ಆಗದು. ಸೌಂದರ್ಯವನ್ನೇ ಅನುಭವಿಸುವುದಷ್ಟೇ ನಮ್ಮ ಕೆಲಸ. ಗುಲಾಬಿ ಹೂವೇ ಸುಂದರ. ಅದನ್ನು ಸುಂದರ ಮಾಡಲು ಸಾಧ್ಯವೇ? ಹಾಗೆಯೇ ಸಂಗೀತದ ಸೌಂದರ್ಯೀಕರಣಕ್ಕೆ ಯಾವ ಪ್ರಸಾಧನವೂ ನಮ್ಮಲ್ಲಿ ಇಲ್ಲ. ಅದಕ್ಕೆ ತಲ್ಲೀನತೆ-ತಾದಾತ್ಮ್ಯ ಮುಖ್ಯ. ನಮ್ಮ ಮನೋಧರ್ಮವೂ ಅಷ್ಟೇ ಮುಖ್ಯ.
* ಸಂಗೀತಾನುಭವದ ವ್ಯಾಖ್ಯಾನ?
ನನಗನ್ನಿಸೋದು ಒಂದು ಸಂಗೀತ ಕಛೇರಿ ಆನಂದವನ್ನು ಉಕ್ಕಿಸಬೇಕು. ಅದು ಮನದೊಳಗಿನ ಆನಂದ. ರಾಗದ ಸಂಚಾರ ಮುಗಿದ ಮೇಲೂ ನಮ್ಮೊಳಗೆ ಅದರ ಗುನುಗು ಸಂಚರಿಸುತ್ತಲೇ ಇರಬೇಕು. ಅದು ಒಂದು ರೀತಿಯಲ್ಲಿ ಮನಮುದ್ರೆಯಲ್ಲಿ ಸ್ಟೋರ್ ಆಗುವ ಬಗೆ. ನೆನಪಾದಾಗಲೆಲ್ಲಾ ರಾಗ ರಂಜಿಸಿ ಆ ಸಂಗೀತ ಕಛೇರಿಯ ಅನುಭವವನ್ನೇ ನೀಡಬಲ್ಲದು. ಸವಿ ನೆನಪು ಎಂದಿಟ್ಟುಕೊಳ್ಳಿ. ಅದು ಶ್ರೇಷ್ಠ ಸಂಗೀತ. ಪ್ರತಿ ಬಾರಿ ಸ್ಮೃತಿಪಟಲದಲ್ಲಿ ಹಾದುಹೋಗುವಾಗಲೂ ಅದೇ ಜೀವಂತಿಕೆಯಿರಲು ಸಾಧ್ಯ.
* ಕಛೇರಿಗೆ ಜೀವಂತಿಕೆ ತಂದುಕೊಡುವುದು ಹೇಗೆ?
ಪ್ರತಿ ಸಂಗೀತ ಕಛೇರಿಯೂ “ಘಟಿಸುತ್ತದೆ’. ಅದೊಂದು ಘಟನೆ ಮಾದರಿಯಲ್ಲಿ. ಪೂರ್ವನಿಯೋಜಿತವಾಗಿರುವುದಿಲ್ಲ. ಸಂಗೀತಗಾರನೂ ಹಿಂದಿನ ಕಛೇರಿಯಲ್ಲೇ ಹಾಡಿದ ರಾಗಗಳನ್ನು ಮತ್ತೆ ಹಾಡುತ್ತಿರಬಹುದು. ಆದರೆ ಪುನರ್ ನಿರ್ಮಾಣ. ಆ ರಾಗವನ್ನೂ ನಾನೂ ಮತ್ತೊಮ್ಮೆ ಅನುಭವಿಸುತ್ತೇನೆ. ಹಾಗೆಯೇ ಸಂಗೀತ ಪ್ರೇಮಿಗಳೂ. ಎಂದಿಗೂ ಥೇಟ್ ಹಿಂದಿನ ಕಛೇರಿಯಂತೆ ಹಾಡಲಾಗದು. ಹಾಗಾಗಿಯೇ ಅದನ್ನು ಘಟಿಸುವುದು ಎಂಬುದೇ ನನ್ನ ಅಭಿಪ್ರಾಯ.
* ಇಂಗ್ಲಿಷ್ ಪ್ರೊಫೆಸರ್ ಆದ ನಿಮ್ಮ ದೃಷ್ಟಿಯಲ್ಲಿ ಜಾಗತೀಕರಣ-ಭಾರತೀಯ ಪರಂಪರೆ ಇತ್ಯಾದಿ ಏನನ್ನಿಸುತ್ತದೆ?
ಪ್ರಸಾರ ಭಾರತಿ(ಆಕಾಶವಾಣಿ)ಯಂತಹ ಸಂಸ್ಥೆಗಳೇ ಸಂಗೀತ ಹಾಡೋ ಕಲಾವಿದರೇ ಅವರ ಕಾರ್ಯಕ್ರಮದ ಪ್ರಾಯೋಜಕರನ್ನು ಹುಡುಕಿಕೊಂಡು ಬನ್ನಿ ಎಂದು ಹೇಳುವ ಸ್ಥಿತಿ ಎಲ್ಲವನೂ ಬಿಂಬಿಸಬಲ್ಲದು. ಕಲೆಯನ್ನು ವ್ಯಾಪಾರೀಕರಣಗೊಳಿಸುವುದು ಸಲ್ಲ. ಆ ದೃಷ್ಟಿಯಲ್ಲಿ ರಾಜಿಯಾಗಲೀ, ಹೊಂದಾಣಿಕೆಯಾಗಲೀ ಅತ್ಯಂತ ಅಪಾಯಕರ.  ಪರಂಪರೆ ಬಗ್ಗೆ ಮಾತಾಡುವುದನ್ನು ಕಲಿತಿದ್ದೇವೆಯೇ ವಿನಾ ನಿಜವಾದ ಕಾಳಜಿಯನ್ನು ರೂಢಿಸಿಕೊಂಡಿಲ್ಲ. ಹಾಗಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ನಮ್ಮ ಪ್ರಯತ್ನವೂ ಕಸುವಿನಿಂದ ಕೂಡಿಲ್ಲ ಎನಿಸುತ್ತದೆ.
* ದಿನೇ ದಿನೇ ಭಾರತೀಯ ಸಂಗೀತ, ಕಲೆಯತ್ತ ಯವಜನತೆ ಆಸಕ್ತಿ ತೋರುತ್ತಿದ್ದಾರಲ್ಲ?
ಇರಬಹುದು. ಆದರೆ ಆ ಮಕ್ಕಳು ಪರಂಪರೆಯ ಬಗ್ಗೆ ನಿಜವಾದ ಕಾಳಜಿ ಮೂಡಿಸಿಕೊಳ್ಳಲು ಹೋಗುತ್ತಿದ್ದಾರೆಯೇ? ಇಲ್ಲ. ಅವರಿಗೆ ಡಿಗ್ರಿ ಬೇಕು. ಇದು ಸಂಗೀತಕದ ಬಗ್ಗೆ ಮಾಹಿತಿ ನೀಡುತ್ತದೆಯೇ ಹೊರತು ಸಂಗೀತಗಾರರಾಗಿ ರೂಪಿಸುವುದಿಲ್ಲ.   ವಿಶ್ವವಿದ್ಯಾಲಯಗಳೂ ಸಂಗೀತ ಪದವಿ ನೀಡುತ್ತಿವೆ. ಅಲ್ಲಿ ಪಿಎಚ್‌ಡಿ ಮಾಡಿದವರು ಉಪನ್ಯಾಸಕರು. ಅವರಿಗೆ eನ ಇದೆ, ಆದರೆ ಅನುಭವವಿಲ್ಲ. ಅನುಭವವಿರದೇ ಒಂದು ಪರಂಪರೆಯನ್ನು ಹರಿಸಲು ಸಾಧ್ಯವಾಗದು. ಸಂಗೀತ ಸಾಧಕರನ್ನು ಅತಿಥಿ ಉಪನ್ಯಾಸಕರ ರೀತಿಯಲ್ಲಿ ಬಳಸಿಕೊಳ್ಳುವ “ಪರಂಪರೆ’ ನಮ್ಮಲ್ಲಿ ಜೀವಂತವಾಗಬೇಕು. ಸಂಗೀತವೂ ವೃದ್ಧಿ ; ಪರಂಪರೆಗೂ ನವಕಳೆ.
* ಭಾರತೀಯ ಸಂಗೀತದ ಅಂತಃಶಕ್ತಿ ಆಧ್ಯಾತ್ಮವೇ? ಆದರಿಂದ ವ್ಯಾಪಾರೀಕರಣವಾಗುತ್ತಿರುವ ಆತಂಕ ಕುರಿತು?
ಹೌದು. ಆದರೆ ಹಿಂದೆ ಪೋಷಣೆಯ ಸ್ಥಾನ ರಾಜರ ಆಸ್ಥಾನವಾದರೆ, ಪ್ರದರ್ಶನ ಸ್ಥಾನ ದೇವಸ್ಥಾನ-ಗುಡಿ-ಗುಂಡಾರಗಳು. ಇಂದು ಆ ಎರಡೂ ಸ್ಥಾನಗಳೂ ಬರಿದಾಗಿವೆ. ಶಾಹು ಮಹಾರಾಜ್ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಾವಾಗಲೂ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಇಂತಹ ಉದಾಹರಣೆ ಬೇಕಾದಷ್ಟಿವೆ. ಈಗ ನಾವು ಪುನಃ ಮಸೀದಿ, ದೇವಸ್ಥಾನ, ಗುಡಿ-ಗುಂಡಾರಗಳನ್ನು ಸಾಂಸ್ಕೃತಿಕ ಕಲೆಯ ಸ್ಥಾನವಾಗಿ ಮಾರ್ಪಡಿಸಿದರೆ ಸಂಸ್ಕೃತಿ ಹಾಗೂ ಪರಂಪರೆ ಎರಡೂ ಏಕಕಾಲದಲ್ಲಿ ಪುನರುಜ್ಜೀವನಗೊಂಡೀತು. ಸಮಾಜದ ಸಹಕಾರದ ನಡುವೆ ಈ ಕೆಲಸವನ್ನು ನಾವು ಮೊದಲು ಮಾಡಬೇಕು. 
* ಒಂದು ರಾಗ ಪೂರ್ಣಗೊಳ್ಳುವುದು ಅಥವಾ ಪೂರ್ಣತ್ವ ಪಡೆಯುವುದು ಯಾವಾಗ? 
ಒಂದು ರಾಗದ ಗಾಯನ ನಮಗೆ ಆ ರಾಗದ ದರ್ಶನ ನೀಡುವಂತಾದಾರೆ ಪೂರ್ಣತ್ವ ಪಡೆದಂತೆ. ಕಣ್ಣಿನ ಮುಂದೆ ಮೂಡುವುದು ಎಂಬ ಮಾತಿದೆ. ಹಾಗೆಯೇ ರಾಗ ಕಣ್ಣೆದುರು ನಿಂತಂತೆ ಆಗಬೇಕು. ಈ ಮಾತನ್ನು ಶಬ್ದಾರ್ಥ ಮಾಡಬಾರದು. ಭಾವಾರ್ಥ ಮಾತ್ರ ತಿಳಿಯಬೇಕು. ನಮ್ಮೊಳಗೆ ಆ ರಾಗದ ಸಂಚಾರ ದಿವ್ಯಾನುಭವ ನೀಡಬೇಕು. ರಾಗ, ಜೀವಸ್ವರದಿಂದ ಪ್ರಭಾವಿತವಾಗಬೇಕು. ಅದು ರಾಗದ ಪೂರ್ಣತ್ವ. ಮುಂಜಾನೆಗೆ ಮಿಯಾ ಕಿ ತೋಡಿ, ಆಹಿರ್ ಭೈರವ್, ಸಂಜೆಗೆ ಪುರಿಯಾ, ಪೂರ್ವ, ಬಿಹಾಗ್ ನನಗೆ ಅತಿ ಸಮೀಪದ್ದು.
* ನಿಮ್ಮ ತಂದೆಯ ಒಂದು ಒಳ್ಳೆಗುಣ ಮತ್ತು ಕೆಟ್ಟಗುಣ?
ತಂದೆ ಎಲ್ಲರನ್ನೂ ಹೊಗಳುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಇದೇ ಒಳ್ಳೆಯದು ಮತ್ತು ಕೆಟ್ಟದೂ ಸಹ. ಎಲ್ಲರನ್ನೂ ಪ್ರಶಂಸೆ ಮಾಡುವುದು ಅಷ್ಟೊಂದು ಉಚಿತವಲ್ಲ. ಕಾರಣ, ಸರಿಯಿಲ್ಲದ್ದನ್ನೂ ಸರಿಯಿದೆ ಎಂದು ಪ್ರಶಂಸೆ ಮಾಡುವಾಗ ಯಾರದೋ ಉಚಿತವಲ್ಲದ ಗುಣವನ್ನೂ ಹೊಗಳಿದಂತೆ ಅನಿಸುವುದಿಲ್ಲವೇ?
* ಗುರುಕುಲ ಸಂಗೀತ ಪದ್ಧತಿ ಜೀವಂತಗೊಳ್ಳುವುದೆ?
ಜೀವಂತಗೊಳಿಸಬೇಕು. ಕಾರ್ಪೋರೇಟ್ ಸಂಸ್ಥೆಗಳು, ಶ್ರೀಮಂತರು “ಬ್ಯಾಕ್‌ಡ್ರಾಪ್’ ಗಳಾಗಿ ಗುರುಕುಲವನ್ನು ಸ್ಥಾಪಿಸಬೇಕು. ಯಾವುದಕ್ಕೂ ಹಸ್ತಕ್ಷೇಪ ಮಾಡದೇ ಸಂಸ್ಕೃತಿಯನ್ನು ಉಳಿಸುವ-ಬೆಳೆಸುವ ಕಾರ್ಯ ಮಾಡಬೇಕು. ಅದಾದರೆ ಸಾಧ್ಯ.
ಹೀಗೆ ತಮ್ಮ ಅನುಭವಗಳನ್ನು ತೋಡಿಕೊಳ್ಳುವ ರಾಜಶೇಖರ ಮನ್ಸೂರರ  ಸೋದರಿಯರ ಪೈಕಿ ನೀಲಾ ಕೊಡ್ಲಿ ಸಂಗೀತ ಪ್ರಪಂಚಕ್ಕೆ ಬರುತ್ತಿರುವವರು. ಜತೆಗೆ ಪ್ರಿಯದರ್ಶಿ ಕುಲಕರ್ಣಿ ಶಿಷ್ಯೆ. ಉಳಿದಂತೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಸಂಗೀತ ಕಲಿಯುವಂತೆ ಒತ್ತಾಯಿಸಿಲ್ಲ.  ಹಾಡುತ್ತಿರುವಾಗ ಯಾರಾದರೂ ಒಂದಷ್ಟು ರಿಲೀಫ್ ಎನಿಸಿ “ಹಾಯ್’ ಎಂದೆನಿಸಿದರೆ ಇವರಿಗೂ “ಹಾಯ್’ ಅನಿಸುತ್ತದೆ. ಇದು ರಾಗಕ್ಕೆ ಸಿಕ್ಕ ದರ್ಶನ, ಪರಿಶ್ರಮಕ್ಕೆ ಸಿಕ್ಕ ಫಲ. ಪರಂಪರೆಯ ಅಂತಃಶಕ್ತಿ ಕೂಡ.

( ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ ಲೇಖನ. ನನ್ನ ಸಂಗ್ರಹದಿಂದ ಇದನ್ನು ಇಲ್ಲಿ ಹಾಕಿದ್ದೇನೆ. ಇಲ್ಲಿನ ಬಹಳಷ್ಟು ಅಂಶಗಳು ಚರ್ಚೆಗೀಡಾಗುವಂಥದ್ದು ಮತ್ತು ಬಹಳ ವಿಶೇಷವೆನಿಸುವಂಥದ್ದು. ಅದಕ್ಕೇ ಇಲ್ಲಿ ನೀಡಲಾಗಿದೆ. ಅಭಿಪ್ರಾಯ ತಿಳಿಸಬಹುದು-ಸುಗಂಧ)

ದಿನದರ್ಶಿ

ಜೂನ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
2627282930  

ಅನುಭವಿಸಿದವರು

  • 2,615 ಅನುಭಾವಿಗಳು