ಮೂಲಭೂತವಾಗಿ ಶಿಲ್ಪಕಲೆಯನ್ನು ಎರಡು ಭಾಗವಾಗಿ ವಿಭಾಗಿಸಬಹುದು. ಒಂದು, ನಾಲ್ಕು ಕಡೆಗಳಿಂದಲೂ ವೀಕ್ಷಿಸಬಹುದಾದ ಶಿಲ್ಪಗಳು ಉದಾಹರಣೆಗೆ ವೀನಸ್ ಆಫ್ ವಿಲ್ಲೆನ್‌ಡಾರ್ಫ್, ಈ ಮಾದರಿಯ ಶಿಲ್ಪಗಳು ಪರಿಪೂರ್ಣತೆಗೆ ಒತ್ತು ಕೊಟ್ಟಂತೆ ಪೂರ್ತಿಯಾಗಿ ಕಡೆದಂತವುಗಳಾಗಿರುತ್ತವೆ. ಇಂತಹ ಶಿಲ್ಪದ ಸುತ್ತಲೂ ಕಲೆಯ ಮೊಹರುಗಳಿರುತ್ತವೆ. ಮತ್ತು ಇವನ್ನು ಸುತ್ತಲಿಂದಲೂ ವೀಕ್ಷಿಸಬಹುದು.
ಮತ್ತೊಂದು ಒಂದೇ ಮೇಲ್ಮೈನ ಶಿಲ್ಪಗಳು(ಉಬ್ಬು ಅಥವಾ ತಗ್ಗು ಶಿಲ್ಪಗಳು). ಉದಾಹರಣೆಗೆ ವೀನಸ್ ಆಫ್ ಲಾಸೆಲ್ ಶಿಲ್ಪ.

ಬಹುತೇಕ ಇತಿಹಾಸಪೂರ್ವ ಶಿಲ್ಪಗಳು ಸುತ್ತಲೂ ಕಡೆದಂತವುಗಳಾಗಿದ್ದರೂ ಪ್ಯಾಲಿಯೋಲಿಥಿಕ್ ಶಿಲ್ಪಿಗಳು ಏಕಮುಖ ಕೆತ್ತನೆಯ ಶಿಲ್ಪಗಳನ್ನೂ ಕೆತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ವೀನಸ್ ಆಫ್ ಲಾಸೆಲ್. ಇದು ಕೆಂಪು ವರ್ಣದ ಶಿಲೆಯಲ್ಲಿ ಕಡೆಯಲಾದ ಶಿಲ್ಪ. ಬಹುಷಃ ಕೆಂಪು ವರ್ಣ ಮಗುವಿನ ಹುಟ್ಟುವಿಕೆಯನ್ನು ಬಿಂಬಿಸುವಂತದ್ದು. ಉಪಸ್ಥಾಶಯ ಮತ್ತು ಸ್ತನದ ಆಕೃತಿ ಸಾಮಾನ್ಯ ಆಕಾರಕ್ಕಿಂತ ತುಸು ದೊಡ್ಡದಾಗೇ ಕೆತ್ತಲಾಗಿದೆ. ಉಳಿದಂತೆ ವೀನಸ್ ಆಫ್ ವಿಲ್ಲೆಂಡಾರ್ಫ್ ಶಿಲ್ಪಕ್ಕಿಂತ ವಿವರವಾಗಿ ಕೈಯನ್ನು ತೋರಿಸಲಾಗಿದೆ. ಈ ಮಹಿಳೆ ಕೈನಲ್ಲಿ ಯಾವುದೋ ಪ್ರಾಣಿಯ ಕೋಡನ್ನು ಹಿಡಿದಿದ್ದಾಳೆ. ಮಹಿಳೆಯ ಆಕೃತಿಯ ಜೊತೆ ಜೊತೆಗೆಂಬಂತೆ ಪ್ಯಾಲಿಯೋಲಿಥಿಕ್ ಶಿಲ್ಪಿಗಳು ಕುದುರೆ, ಕಾಡುಕೋಣ, ಎತ್ತು, ಜಿಂಕೆ, ಮ್ಯಾಮತ್, ಗಂಡು ಹಂದಿ, ಖಡ್ಗ ಮೃಗ, ಮೀನು ಮತ್ತು ಹಕ್ಕಿಗಳನ್ನೂ ಸಹ ಕೆತ್ತಿದ್ದಾರೆ. ತಲೆಯನ್ನು ತಿರುಗಿಸಿರುವ ಕಾಡುಕೋಣದ ಆಕೃತಿ ಫ್ರಾನ್ಸ್ ನಲ್ಲಿ ದೊರೆತಿದೆ.

ಈ ಶಿಲ್ಪವು ಫ್ರಾನ್ಸ್ ನ ಲಾ ಮಾಡೆಲೈನ್ ಎಂಬಲ್ಲಿ ದೊರೆತಿದ್ದು ೧೦.೫ ಸೆಂ.ಮೀ ಗಳಷ್ಟು ಎತ್ತರವಿದೆ. ಇದು ಕ್ರಿ.ಪೂ ೧೧,೦೦೦ ದಿಂದ ೯,೦೦೦ ದ ನಡುವಿನ  ಕಾಲದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಶಿಲ್ಪದಲ್ಲಿ ಕಾಡುಕೋಣದ ಕಾಲುಗಳು ಅಸ್ಪಷ್ಟವಾಗಿದ್ದು ಹಿಂದೆ ತಿರುಗಿರುವ ಮುಖವನ್ನು ಮಾತ್ರ ಸೂಕ್ಷ್ಮವಾಗಿ ಕೆತ್ತಲಾಗಿದೆ. ಕತ್ತಿನ ಕೆಳಗಿನ ಮತ್ತು ಮೇಲಿನ ಕೂದಲುಗಳನ್ನು ಸಾಕಷ್ಟು ವಿವರವಾಗಿ ತೋರಿಸಲಾಗಿದೆ. ಫ್ರಾನ್ಸ್ ನ Tuc d’ Audoubert’  ಎಂಬ ಪ್ರದೇಶದ ಆಳ ಗುಹೆಗಳಲ್ಲಿ ಹಸಿ ಮಣ್ಣಿನಿಂದ ಮಾಡಿದ ಮತ್ತೆ ಕೆಲವು ಪ್ರಾಣಿಗಳ ಶಿಲ್ಪಗಳೂ ದೊರೆತಿವೆ.

                                         -ಸುಗಂಧ