ಕಲೆಯ ಅಗತ್ಯ ನಮಗೆ, ನಮ್ಮ ಭಾವನೆಗಳ ಅಭಿವ್ಯಕ್ತಿಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ದೃಶ್ಯ ಕಲೆಯ ಇತಿಹಾಸದ ಪ್ರಶ್ನೆಗೆ ಬಂದಲ್ಲಿ ಕಲೆಯ ಇತಿಹಾಸದ ಕುರಿತಾದ ಪ್ರಜ್ಞೆಯು ಪುರಾತನ ಇಲ್ಲವೇ ನಂತರದ ಜನಾಂಗಗಳ ಸಂಸ್ಕೃತಿಯ ಸ್ಥೂಲವಾದ ಪರಿಚಯಕ್ಕೆ ಅತ್ಯವಶ್ಯ ಅಲ್ಲದೇ ಬರವಣಿಗೆಯ ಸಾಮಗ್ರಿಗಳು ಮತ್ತು ಆ ಕುರಿತಾದ ಕೌಶಲ್ಯ ಅಭಿವೃದ್ಧಿ ಹೊಂದಿರದ ಕಾಲದ ಜನಜೀವನದ ಚಿತ್ರಣವನ್ನೂ ಇವು ನೀಡುತ್ತವೆ.
ಈ ಎಲ್ಲಾ ಸಂಗತಿಗಳು ಒತ್ತಟ್ಟಿಗಿರಲಿ. ಕಲೆಯ ಕುರಿತು ಇರುವ ನಂಬಿಕೆಗಳಲ್ಲಿ ಮುಖ್ಯವಾದದ್ದೆಂದರೆ ಕಲೆ ಎನ್ನುವುದು ನಮ್ಮ ಭಾವನೆಗಳನ್ನು, ಆಸಕ್ತಿಗಳನ್ನು, ಯೋಚನೆಗಳನ್ನು ಹೊರಹಾಕುವ ಕಿಟಕಿ ಎಂಬುದು.
ಜಗದ್ವಿಖ್ಯಾತ ಚಿತ್ರ ಕಲಾವಿದ ವಿನ್ಸೆಂಟ್ ವ್ಯಾನ್ ಗೋ ನ ಈ ಚಿತ್ರವನ್ನು ಗಮನಿಸಿ.
ವಿನ್ಸೆಂಟ್ ವ್ಯಾನ್ ಗೋ, ಸ್ವಂತ ವ್ಯಕ್ತಿ ಚಿತ್ರ, ೧೮೮೮, ತೈಲ ವರ್ಣ ಚಿತ್ರ (೬೫.೫-೫೦.೫ ಸೆಂ.ಮೀ) ರಿಜ್ಷು ಮ್ಯೂಸಿಯಂ, ಆಮ್ಸ್ಟರ್ ಡ್ಯಾಮ್
ವ್ಯಾನ್ ಗೋ ಬಣ್ಣಗಳಿಂದ ಅದೆಷ್ಟರ ಮಟ್ಟಿಗೆ ಪ್ರಭಾವಿತನಾಗಿದ್ದ ಎಂಬುದನ್ನು ನಾವು ಈ ಚಿತ್ರ ನೋಡಿ ಊಹಿಸಿಕೊಳ್ಳಲು ಸಾಧ್ಯ. ಈ ಚಿತ್ರದಲ್ಲಿ ವ್ಯಾನ್ ಗೋ ತನ್ನನ್ನು ತಾನೇ ಬಿಡಿಸಿಕೊಂಡಿದ್ದಾನೆ. ಈ ಚಿತ್ರದಲ್ಲಿ ತಾನು ಬಿಡಿಸುತ್ತಿರುವ(ನಮಗೆ ಕಾಣುತ್ತಿಲ್ಲ) ಚಿತ್ರದ ಹಿಂಬಾಗದಲ್ಲಿ ಗುರುತಿಸಿಕೊಂಡಿದ್ದಾನೆ. ಆ ಚಿತ್ರ ನಮಗೆ ಕಾಣಿಸದಿದ್ದರೂ ಅದನ್ನು ಕೂಡ ವ್ಯಾನ್ ಗೋ ನ ಸ್ವಂತ ವ್ಯಕ್ತಿ ಚಿತ್ರ ಎಂದು ತರ್ಕಿಸಬಹುದು. ನಮಗೆ ಕಾಣುವ ಚಿತ್ರದಲ್ಲಿ ವ್ಯಾನ್ ಗೋ ನ ಕೈಯಲ್ಲಿ ಪ್ಯಾಲೆಟ್ ಮತ್ತು ಒಂದಿಷ್ಟು ಬ್ರಷ್ ಗಳಿವೆ. ಮತ್ತು ಆ ಬ್ರಷ್, ಪ್ಯಾಲೇಟ್‌ಗಳಿಗೆ ಮೆತ್ತಿಕೊಂಡಿರುವುದು ಈ ಚಿತ್ರಕ್ಕೆ ಬಳಸಿದ ಬಣ್ಣಗಳೇ ಎಂಬುದು ವಿಶೇಷ. ಪ್ಯಾಲೇಟ್‌ನ ಮಧ್ಯಕ್ಕೆ ಕೇಸರಿ ವರ್ಣವಿದ್ದು ಪ್ರಸ್ತುತ ಚಿತ್ರದ ಸರಿಸುಮಾರು ಮಧ್ಯದಲ್ಲಿ ಅಂದರೆ ವ್ಯಾನ್ ಗೋ ನ ಗಡ್ಡದ ಭಾಗದಲ್ಲಿ ಅದು ಬಳಕೆಯಾಗಿದೆ. ಅಲ್ಲದೇ ಇದೇ ಬಣ್ಣದಲ್ಲ್ಲಿ ವ್ಯಾನ್ ಗೋ ತಾನು ರಚಿಸುತ್ತಿರುವಂತೆ ತೋರಿಸಿಕೊಂಡ, ಚಿತ್ರದಲ್ಲಿ ಅವನೆದುರಿಗಿರುವ ಚಿತ್ರದ ಚೌಕಟ್ಟಿನ ಮೇಲೆ ತನ್ನ ಹೆಸರಾದ ವಿನ್ಸೆಂಟ್ ಮತ್ತು ಪ್ರಸ್ತುತ ಚಿತ್ರ ರಚಿಸಿದ ವರ್ಷವಾದ ೮೮ ನ್ನು ನಮೂದಿಸಿದ್ದಾನೆ. ಈ ಚಿತ್ರದಲ್ಲಿ ವ್ಯಾನ್ ಗೋ ಕೌಶಲ್ಯ ಸಹಿತವಾಗಿ ತನ್ನ ಅಭಿವ್ಯಕ್ತಿಯನ್ನು ಮಂಡಿಸಿದ್ದಾನೆ. ಈ ನಿಟ್ಟಿನಲ್ಲಿ ನಾವು ಕಲೆಯೆಂಬುದು ಮನೋರಂಜನೆಯ ಕೈಕರಣವೆಂದು ಗಣಿಸದೇ ಭಾವಾಭಿವ್ಯಕ್ತಿಯ ಮಾಧ್ಯಮವಾಗಿಯೂ ಗುರುತಿಸಬಹುದು- ಸುಗಂಧ