ಅರಳುವಿಕೆ. ಸಹಜತೆಗೆ ಇರುವ ಉಪಮೆ. ರಾಗವೂ ಹೀಗೆಯೇ ಅರಳಬೇಕಂತೆ ; ಪೂರ್ಣತ್ವಕ್ಕಾಗಿ.
“ಅಕ್ಕ ಕೇಳವ್ವಾ ನಾನೊಂದು ಕನಸ ಕಂಡೆ’ ಅಕ್ಕಮಹಾದೇವಿಯ ವಚನ ಕೇಳಿದ ಕೂಡಲೇ ಜೈಪುರ್ ಅಟ್ರೌಲಿ ಘರಾನಾದ ಖ್ಯಾತಿ ಮಲ್ಲಿಕಾರ್ಜುನ ಮನ್ಸೂರ್ ಸ್ಮೃತಿ ಪಟಲದಲ್ಲಿ ಬಂದು ಹಾಡಲು ಆರಂಭಿಸುತ್ತಾರೆ. ವಚನ ಮತ್ತು ಸಂಗೀತ-ಎರಡಕ್ಕೂ ಏಕಕಾಲದಲ್ಲಿ ಒಂದು ತಾದಾತ್ಮ್ಯವನ್ನು ಬೆಸೆದ ಪ್ರಯತ್ನವಿದು. ಮನ್ಸೂರ್, ಸಂಗೀತಕ್ಕೆ ತಮ್ಮ ಬದುಕನ್ನೇ ತೇಯ್ದುಕೊಂಡವರು, ಗಂಧದಂತೆ. ಪರಿಮಳ ಹೊಮ್ಮಿ ನಾಡಿನ ಪ್ರತಿ ಮನೆಯ ಕಂಪೂ ಅವರೇ ಆದಾಗಲೂ ಮನ್ಸೂರರ ಮುಖದಲ್ಲಿ ಆ ಚೆಂದದ ಪೂರ್ಣತ್ವದ ನಗೆ ಮಾಸಿರಲಿಲ್ಲ. ಅವರೋ ಶಿಖರ, ಅವರ ಸಾಧನೆ ಆ ಶಿಖರಕ್ಕೆ ಮುಕುಟಪ್ರಾಯ.
ಇದೇ ಜೈಪುರ್ ಅಟ್ರೌಲಿ ಘರಾನಾವನ್ನು ಅಷ್ಟೇ ಸಮರ್ಥವಾಗಿ ತಮ್ಮದಾಗಿಸಿಕೊಂಡಿರುವ ಮನ್ಸೂರರ ಪುತ್ರ ರಾಜಶೇಖರ ಮನ್ಸೂರ್ ಇಲ್ಲಿ ಉಲ್ಲೇಖನೀಯರು. ರಾಜಶೇಖರ್ ಮನ್ಸೂರ್ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಪಾಠ ಮಾಡಿದವರು. ಪ್ರವೃತ್ತಿಯಲ್ಲಿ ಸಂಗೀತಗಾರ. ವೃತ್ತಿಗೆ ಕೊಟ್ಟಷ್ಟೇ ಆದ್ಯತೆಯನ್ನು ಪ್ರವೃತ್ತಿಗೂ ನೀಡಿರುವುದು ಧನಾತ್ಮಕ ಅಂಶ.
ಪರಂಪರೆಯನ್ನು ತನ್ನ ಪ್ರಯೋಗದ ಕುಲುಮೆಯ ಬಂಡವಾಳವನ್ನಾಗಿಸಿ ಹೊಸತನದಿಂದ ಹಾಡುವ ರಾಜಶೇಖರ ಮನ್ಸೂರರ ಬಗ್ಗೆ ಎರಡು ಮಾತು ಹೇಳಬೇಕು. ಷಷ್ಟ್ಯಾಬ್ದಿಯ ಸಂಭ್ರಮದಲ್ಲಿರುವ ಇವರು ದಕ್ಷಿಣ ಕರ್ನಾಟಕಕ್ಕೆ ಪರಿಚಿತರಾಗಿಯೂ ಅಪರಿಚಿತರಾಗಿರುವವರು. ಆದರೆ ಉತ್ತರ ಭಾರತಕ್ಕೆ ಅಪರಿಚಿತರಾಗಿಯೂ ತೀರಾ ಪರಿಚಿತರಾಗಿರುವವರು. ಒಂದು ಕಡೆ ಹಿತ್ತಲ ಮದ್ದಾದವರು ; ಮತ್ತೊಂದು ಕಡೆ ಪ್ರತಿಭೆಯಿಂದಲೇ ಮಾನ್ಯರಾದವರು.
ಸಜ್ಜನರು-ಸೌಜನ್ಯ-ಸಜ್ಜನಿಕೆ ಎಂದು ಹೇಳುವುದು ತೀರಾ ಕ್ಲೀಷೆ ಎನಿಸಿಬಿಟ್ಟಿದೆ. ಆದರೆ ಬಹಳ ಸಹಜವಾಗಿ ಮಾನವೀಯ ವಾಗಿ ಪ್ರತಿಕ್ರಿಯಿಸುವ ರಾಜಶೇಖರ ಮನ್ಸೂರರರಿಗೆ ನಿಷ್ಠುರವಾಗಿ, ತಿಳಿಯದಿದ್ದನ್ನು “ಗೊತ್ತಿಲ್ಲ’ ಎಂದು ಹೇಳುವ ತಿಳಿವಿದೆ.
ಇಪ್ಪತ್ತು ವರ್ಷ ತಂದೆಯಲ್ಲಿ ತರಬೇತಿ ಪಡೆದ ರಾಜಶೇಖರ ನಂತರ ಕಳೆದ ೨೫ ವರ್ಷಗಳಲ್ಲಿ ಹಲವು ರಾಗಗಳ ಮೂಲ ಸತ್ವವನ್ನೇ ಅರಿತುಕೊಳ್ಳುವತ್ತ ಪ್ರಯತ್ನಿಸಿದ್ದಾರೆ. “ಇನ್ನೂ ಕಲಿಯುತ್ತಿದ್ದೇನೆ, ಸಂಗೀತದ ಎಲ್ಲವೂ ಅರ್ಥವಾಗಿಲ್ಲ. ಇನ್ನೂ ಅರಿತು ಕೊಳ್ಳುವ ಕ್ರಿಯೆ ಸಾಗಿದೆ. ಪೂರ್ಣ ಅರಿತಿಲ್ಲ’ ಎಂದು ಹೇಳುತ್ತಾರೆ. ಸಂದರ್ಶನದ ಉಳಿದ ಭಾಗ ಇಂತಿದೆ :
* ಕಛೇರಿಗಳು ಹೇಗೆ ಸಾಗಿವೆ? ಕರ್ನಾಟಕದಲ್ಲೇ ನಿಮ್ಮ ಪರಿಚಯ ಇನ್ನೂ ಆಗಿಲ್ವೇ?
ಉತ್ತರ ಭಾರತದಲ್ಲಿ ಬಹಳ ಕಾರ್ಯಕ್ರಮ ನೀಡಿದ್ದೇನೆ. ದಿಲ್ಲಿ, ಮುಂಬಯಿ, ಕೋಲ್ಕತ್ತಾ, ಅಹಮದಾಬಾದ್ ಇತ್ಯಾದಿ. ಇತ್ತೀಚಿನ ಕೋಮುಗಲಭೆ ಸಂದರ್ಭದಲ್ಲೂ ಕಾರ್ಯಕ್ರಮ ನೀಡಿದ್ದು ವಿಶೇಷವೆನಿಸಿದೆ. ಕರ್ನಾಟಕದಲ್ಲಿ ಧಾರವಾಡ, ಹುಬ್ಬಳ್ಳಿಯಲ್ಲಿ ಪರಿಚಯವಾಗಿದ್ದೇನೆ. ದಕ್ಷಿಣ ಕರ್ನಾಟಕದಲ್ಲಿ ಬೇಡಿಕೆಯಿಲ್ಲ. ನನಗೂ ಕಾರಣ ಗೊತ್ತಿಲ್ಲ ; ಆ ಬಗ್ಗೆ ಚಿಂತೆನೂ ಮಾಡಿಲ್ಲ. ಉತ್ತರ ಭಾರತದಲ್ಲಿ ಹೆಸರು ಮಾಡಿದ್ದರೂ ನನ್ನ ತಂದೆಯೂ ಅರವತ್ತರ ನಂತರವೇ ಕರ್ನಾಟಕದಲ್ಲಿ ಪ್ರಸಿದ್ಧಿಗೆ ಬಂದವರು.
* ಹಾಗಾದರೆ ಈಗ ನಿಮಗೂ ಅರವತ್ತು ಆಯಿತಲ್ಲ, ಪ್ರಸಿದ್ಧಿಗೆ ಬರುವಿರಾ?
ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾರೆ. ನನ್ನಷ್ಟಕ್ಕೇ ಹಾಡುವುದಷ್ಟೇ ಕೆಲಸ. ಇದೇನೂ ಕೊರತೆ ಎನ್ನಿಸುತ್ತಿಲ್ಲ.
* ಒಂದು ಸಂಗೀತ ಕಛೇರಿಯನ್ನು ವ್ಯಾಖ್ಯಾನಿಸಿ..
ಪ್ರತಿ ಕಛೇರಿಗೂ ಬಹಳ ಮುಕ್ತ ಮನಸ್ಸಿನಿಂದ ಸಾಗುತ್ತೇನೆ. ಸಾಧಾರಣವಾಗಿ ರಾಗಗಳನ್ನು ನಿಗದಿಪಡಿಸಿಕೊಂಡು ಅಭ್ಯಾಸಮಾಡಿ ಹೋಗುವುದಿಲ್ಲ. ನನ್ನ ಗುರುವೂ ಹೇಳಿದಂತೆ ಆ ದಿನದ “ಮೂಡ್’ ಮೇಲೆ ರಾಗಗಳನ್ನು ಪ್ರಸ್ತುತಪಡಿಸುತ್ತೇನೆ. ಉತ್ತರ ಭಾರತದಲ್ಲಿ “ಫರಮಾಹಿಶ್’ ಇರುತ್ತೆ. ಸಂಗೀತ ಪ್ರೇಮಿಗಳು ಇಂತಹ ರಾಗ ಹಾಡಿ ಎಂದು ಕೋರುತ್ತಾರೆ. ಅಂತಹವುಗಳಿಗೆ ಮನ್ನಣೆ ನೀಡುತ್ತೇನೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಹಾಡದಿದ್ದರೆ ಸರಿ ಎನಿಸುವುದಿಲ್ಲ. ಜನಪ್ರಿಯತೆಗಾಗಿ ನಾನು ಹಾಡೋದಿಲ್ಲ.
* ತಂದೆಯಂತೆ ವಚನ ಹಾಡಲಿಕ್ಕೆ ಏಕೆ ಪ್ರಯತ್ನಿಸಿಲ್ಲ?
ಇಲ್ಲ, ಹಾಗೇನೂ ನಿರ್ಬಂಧವಿಲ್ಲ. ವಚನವನ್ನೂ ಹಾಡುತ್ತೇನೆ. ಆದರೆ ನಾನು “ಖ್ಯಾಲ್’ ಗೆ ಅರ್ಪಿಸಿಕೊಂಡುಬಿಟ್ಟಿದ್ದೇನೆ. ಅದನ್ನೇ ಇನ್ನಷ್ಟು ಇನ್ನಷ್ಟು ಅಂತರ್ಗತಗೊಳಿಸಿಕೊಳ್ಳುವುದು ನನ್ನ ಸಾಧನೆಯ ಹಾದಿ. ಅದರಲ್ಲೇ ಪರಿಪೂರ್ಣನಾಗಬೇಕೆಂಬ ಇಚ್ಛೆಯೂ ನನ್ನದು. ಹಾಗಾಗಿ ಅದರಲ್ಲೇ ತಲ್ಲೀನನಾಗಿದ್ದೇನೆ. ಆದರೆ ಹಾಡಬಾರದೆಂಬುದಾಗಲೀ ಅಥವಾ ಶಾಸ್ತ್ರೀಯ ಗಾಯಕರು ವಚನ, ದಾಸರ ಪದ ಹಾಡುವುದು ತಪ್ಪು ಎಂಬ ಅಭಿಪ್ರಾಯವಾಗಲೀ ನನ್ನದಲ್ಲ.
* ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೃತಿಗಳನ್ನು ಪರಿಚಯಿಸದಿದ್ದರೆ ಕನ್ನಡಕ್ಕೇ ಕೊರತೆ ಅಲ್ಲವೇ?
ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ. ಶಾಸ್ತ್ರೀಯ ಮಟ್ಟುಗಳಿಂದ ಕೂಡಿದ ಶಾಸ್ತ್ರೋಕ್ತ ರಚನೆ(ಬಂದಿಶ್)ಗಳನ್ನು ಉತ್ತರ ಭಾರತದ ಗಾಯಕರೇ ಕಟ್ಟಿಕೊಟ್ಟಿದ್ದಾರೆ. ಅಂತಹ ರಚನೆ ನಮ್ಮಲ್ಲಿ ಇಲ್ಲ. ಸಂಗೀತ ದೃಷ್ಟಿಕೋನಕ್ಕೆ ಹೊಂದುವಂತಿರಬೇಕು. ಅಂತಹ ರಚನೆಗಳೂ ಕನ್ನಡದಲ್ಲೂ ಸಿಕ್ಕರೆ ನಾನು ಖಂಡಿತಾ ಹಾಡುತ್ತೇನೆ. ಕವಿ ಹೃದಯಿಗಳು ಸಂಗೀತದ ಅಗತ್ಯವನ್ನೂ ಅರಿತು ರಚಿಸಿದರೆ ಅತ್ಯಂತ ಸೂಕ್ತ. ಅಂತಹವು ರಚನೆಯಾದರೆ ಮೊದಲು ಖುಷಿ ಪಡುವವನೇ ನಾನು.
* ಸಂಗೀತಗಾರರು, ಸಾಹಿತಿಗಳು, ಕಲಾವಿದರೆಲ್ಲಾ ಸಾಮಾಜಿಕ ಸಂದರ್ಭಗಳಿಂದ(ಸಾಮಾಜಿಕ ತಲ್ಲಣ ಇತ್ಯಾದಿ) ಹೊರ ಬರುವುದಿಲ್ಲ ಏಕೆ? ದಂತಗೋಪುರದಲ್ಲೇ ಯಾಕೆ ಉಳಿಯುತ್ತಾರೆ?
ಸಾಮಾಜಿಕ ಸಂದರ್ಭಗಳಿಗೆ ಎಲ್ಲರೂ ಪ್ರತಿಕ್ರಿಯಿಸಬೇಕು. ಸಮಾಜದೊಳಗೆ ಬದುಕುವುದರಿಂದ ಅಲ್ಲಿನ ತಲ್ಲಣಗಳಿಗೆ ಸ್ಪಂದಿಸದಿದ್ದರೆ ಕಷ್ಟ. ನನಗೆ ತಿಳಿದಂತೆ ಹಲವು ಸನ್ನಿವೇಶಗಳಲ್ಲಿ ಕೆಲವರು ಸ್ಪಂದಿಸಿದ್ದಾರೆ. ಆದರೆ ಅವರ ಪ್ರಮಾಣ ಕಡಿಮೆ ಇರುವುದು ನಿಜ. ಸಮಾಜವೇ ಅವನಿಗೆ ಮಾನ್ಯತೆ ನೀಡುವಾಗ ಅದರ ಸಂದರ್ಭಗಳಿಗೆ ಪ್ರತಿಕ್ರಿಯಿಸದಿದ್ದರೆ ತಪ್ಪು. ಇದು ನನ್ನ ನಿಲುವು.
* ಪ್ರಜ್ಞಾವಂತಿಕೆ ಸಂಗೀತ ಆಸ್ವಾದನೆಗೆ ಧಕ್ಕೆಯಾಗುತ್ತಾ?
ಒಂದು ಅರ್ಥದಲ್ಲಿ ಈ ಮಾತು ನಿಜ. ಪ್ರಜ್ಞಾವಂತಿಕೆ ಬಳಕೆಯ ಔಚಿತ್ಯ ಅರಿವಿರಬೇಕು. ನಾನು ಸಂಗೀತ ಕಲಿದ್ದು ವಿಶ್ಲೇಷಣೆಗಳ ಮೂಲಕವಲ್ಲ. ನನ್ನ ತಂದೆ ರಾಗಗಳೊಳಗೆ ಹೋಗಿ ಹಾಡುತ್ತಿದ್ದರಲ್ಲ. ಅದೇ ಅಚ್ಚರಿ ಎನಿಸುತ್ತಿತ್ತು. ಅವರೇ ರಾಗವನ್ನು ಸೃಷ್ಟಿಸುತ್ತಿದ್ದರು ಎನಿಸುತ್ತಿತ್ತು ನನಗೆ. ನನ್ನ ನೆಲೆಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗಿದ್ದೇನೆ. ವಿದ್ವತ್, ತಂತ್ರಗಳ ಬಗ್ಗೆ ಸ್ವರ ಹಚ್ಚುವಾಗಲೂ ಗಮನ ಕೊಡುವವರನ್ನು ನೋಡಿದ್ದೇನೆ. ಆದರೆ ಅಲ್ಲಿ ಹುಟ್ಟುವ ಆನಂದವನ್ನು ಅನುಭವಿಸುವುದು ತಿಳಿದಿರುವುದಿಲ್ಲ.
ಸಂಗೀತವೇ ಸುಂದರ. ಅದನ್ನು ಸುಂದರಗೊಳಿಸಲಿಕ್ಕೆ ಆಗದು. ಸೌಂದರ್ಯವನ್ನೇ ಅನುಭವಿಸುವುದಷ್ಟೇ ನಮ್ಮ ಕೆಲಸ. ಗುಲಾಬಿ ಹೂವೇ ಸುಂದರ. ಅದನ್ನು ಸುಂದರ ಮಾಡಲು ಸಾಧ್ಯವೇ? ಹಾಗೆಯೇ ಸಂಗೀತದ ಸೌಂದರ್ಯೀಕರಣಕ್ಕೆ ಯಾವ ಪ್ರಸಾಧನವೂ ನಮ್ಮಲ್ಲಿ ಇಲ್ಲ. ಅದಕ್ಕೆ ತಲ್ಲೀನತೆ-ತಾದಾತ್ಮ್ಯ ಮುಖ್ಯ. ನಮ್ಮ ಮನೋಧರ್ಮವೂ ಅಷ್ಟೇ ಮುಖ್ಯ.
* ಸಂಗೀತಾನುಭವದ ವ್ಯಾಖ್ಯಾನ?
ನನಗನ್ನಿಸೋದು ಒಂದು ಸಂಗೀತ ಕಛೇರಿ ಆನಂದವನ್ನು ಉಕ್ಕಿಸಬೇಕು. ಅದು ಮನದೊಳಗಿನ ಆನಂದ. ರಾಗದ ಸಂಚಾರ ಮುಗಿದ ಮೇಲೂ ನಮ್ಮೊಳಗೆ ಅದರ ಗುನುಗು ಸಂಚರಿಸುತ್ತಲೇ ಇರಬೇಕು. ಅದು ಒಂದು ರೀತಿಯಲ್ಲಿ ಮನಮುದ್ರೆಯಲ್ಲಿ ಸ್ಟೋರ್ ಆಗುವ ಬಗೆ. ನೆನಪಾದಾಗಲೆಲ್ಲಾ ರಾಗ ರಂಜಿಸಿ ಆ ಸಂಗೀತ ಕಛೇರಿಯ ಅನುಭವವನ್ನೇ ನೀಡಬಲ್ಲದು. ಸವಿ ನೆನಪು ಎಂದಿಟ್ಟುಕೊಳ್ಳಿ. ಅದು ಶ್ರೇಷ್ಠ ಸಂಗೀತ. ಪ್ರತಿ ಬಾರಿ ಸ್ಮೃತಿಪಟಲದಲ್ಲಿ ಹಾದುಹೋಗುವಾಗಲೂ ಅದೇ ಜೀವಂತಿಕೆಯಿರಲು ಸಾಧ್ಯ.
* ಕಛೇರಿಗೆ ಜೀವಂತಿಕೆ ತಂದುಕೊಡುವುದು ಹೇಗೆ?
ಪ್ರತಿ ಸಂಗೀತ ಕಛೇರಿಯೂ “ಘಟಿಸುತ್ತದೆ’. ಅದೊಂದು ಘಟನೆ ಮಾದರಿಯಲ್ಲಿ. ಪೂರ್ವನಿಯೋಜಿತವಾಗಿರುವುದಿಲ್ಲ. ಸಂಗೀತಗಾರನೂ ಹಿಂದಿನ ಕಛೇರಿಯಲ್ಲೇ ಹಾಡಿದ ರಾಗಗಳನ್ನು ಮತ್ತೆ ಹಾಡುತ್ತಿರಬಹುದು. ಆದರೆ ಪುನರ್ ನಿರ್ಮಾಣ. ಆ ರಾಗವನ್ನೂ ನಾನೂ ಮತ್ತೊಮ್ಮೆ ಅನುಭವಿಸುತ್ತೇನೆ. ಹಾಗೆಯೇ ಸಂಗೀತ ಪ್ರೇಮಿಗಳೂ. ಎಂದಿಗೂ ಥೇಟ್ ಹಿಂದಿನ ಕಛೇರಿಯಂತೆ ಹಾಡಲಾಗದು. ಹಾಗಾಗಿಯೇ ಅದನ್ನು ಘಟಿಸುವುದು ಎಂಬುದೇ ನನ್ನ ಅಭಿಪ್ರಾಯ.
* ಇಂಗ್ಲಿಷ್ ಪ್ರೊಫೆಸರ್ ಆದ ನಿಮ್ಮ ದೃಷ್ಟಿಯಲ್ಲಿ ಜಾಗತೀಕರಣ-ಭಾರತೀಯ ಪರಂಪರೆ ಇತ್ಯಾದಿ ಏನನ್ನಿಸುತ್ತದೆ?
ಪ್ರಸಾರ ಭಾರತಿ(ಆಕಾಶವಾಣಿ)ಯಂತಹ ಸಂಸ್ಥೆಗಳೇ ಸಂಗೀತ ಹಾಡೋ ಕಲಾವಿದರೇ ಅವರ ಕಾರ್ಯಕ್ರಮದ ಪ್ರಾಯೋಜಕರನ್ನು ಹುಡುಕಿಕೊಂಡು ಬನ್ನಿ ಎಂದು ಹೇಳುವ ಸ್ಥಿತಿ ಎಲ್ಲವನೂ ಬಿಂಬಿಸಬಲ್ಲದು. ಕಲೆಯನ್ನು ವ್ಯಾಪಾರೀಕರಣಗೊಳಿಸುವುದು ಸಲ್ಲ. ಆ ದೃಷ್ಟಿಯಲ್ಲಿ ರಾಜಿಯಾಗಲೀ, ಹೊಂದಾಣಿಕೆಯಾಗಲೀ ಅತ್ಯಂತ ಅಪಾಯಕರ. ಪರಂಪರೆ ಬಗ್ಗೆ ಮಾತಾಡುವುದನ್ನು ಕಲಿತಿದ್ದೇವೆಯೇ ವಿನಾ ನಿಜವಾದ ಕಾಳಜಿಯನ್ನು ರೂಢಿಸಿಕೊಂಡಿಲ್ಲ. ಹಾಗಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ನಮ್ಮ ಪ್ರಯತ್ನವೂ ಕಸುವಿನಿಂದ ಕೂಡಿಲ್ಲ ಎನಿಸುತ್ತದೆ.
* ದಿನೇ ದಿನೇ ಭಾರತೀಯ ಸಂಗೀತ, ಕಲೆಯತ್ತ ಯವಜನತೆ ಆಸಕ್ತಿ ತೋರುತ್ತಿದ್ದಾರಲ್ಲ?
ಇರಬಹುದು. ಆದರೆ ಆ ಮಕ್ಕಳು ಪರಂಪರೆಯ ಬಗ್ಗೆ ನಿಜವಾದ ಕಾಳಜಿ ಮೂಡಿಸಿಕೊಳ್ಳಲು ಹೋಗುತ್ತಿದ್ದಾರೆಯೇ? ಇಲ್ಲ. ಅವರಿಗೆ ಡಿಗ್ರಿ ಬೇಕು. ಇದು ಸಂಗೀತಕದ ಬಗ್ಗೆ ಮಾಹಿತಿ ನೀಡುತ್ತದೆಯೇ ಹೊರತು ಸಂಗೀತಗಾರರಾಗಿ ರೂಪಿಸುವುದಿಲ್ಲ. ವಿಶ್ವವಿದ್ಯಾಲಯಗಳೂ ಸಂಗೀತ ಪದವಿ ನೀಡುತ್ತಿವೆ. ಅಲ್ಲಿ ಪಿಎಚ್‌ಡಿ ಮಾಡಿದವರು ಉಪನ್ಯಾಸಕರು. ಅವರಿಗೆ eನ ಇದೆ, ಆದರೆ ಅನುಭವವಿಲ್ಲ. ಅನುಭವವಿರದೇ ಒಂದು ಪರಂಪರೆಯನ್ನು ಹರಿಸಲು ಸಾಧ್ಯವಾಗದು. ಸಂಗೀತ ಸಾಧಕರನ್ನು ಅತಿಥಿ ಉಪನ್ಯಾಸಕರ ರೀತಿಯಲ್ಲಿ ಬಳಸಿಕೊಳ್ಳುವ “ಪರಂಪರೆ’ ನಮ್ಮಲ್ಲಿ ಜೀವಂತವಾಗಬೇಕು. ಸಂಗೀತವೂ ವೃದ್ಧಿ ; ಪರಂಪರೆಗೂ ನವಕಳೆ.
* ಭಾರತೀಯ ಸಂಗೀತದ ಅಂತಃಶಕ್ತಿ ಆಧ್ಯಾತ್ಮವೇ? ಆದರಿಂದ ವ್ಯಾಪಾರೀಕರಣವಾಗುತ್ತಿರುವ ಆತಂಕ ಕುರಿತು?
ಹೌದು. ಆದರೆ ಹಿಂದೆ ಪೋಷಣೆಯ ಸ್ಥಾನ ರಾಜರ ಆಸ್ಥಾನವಾದರೆ, ಪ್ರದರ್ಶನ ಸ್ಥಾನ ದೇವಸ್ಥಾನ-ಗುಡಿ-ಗುಂಡಾರಗಳು. ಇಂದು ಆ ಎರಡೂ ಸ್ಥಾನಗಳೂ ಬರಿದಾಗಿವೆ. ಶಾಹು ಮಹಾರಾಜ್ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಾವಾಗಲೂ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಇಂತಹ ಉದಾಹರಣೆ ಬೇಕಾದಷ್ಟಿವೆ. ಈಗ ನಾವು ಪುನಃ ಮಸೀದಿ, ದೇವಸ್ಥಾನ, ಗುಡಿ-ಗುಂಡಾರಗಳನ್ನು ಸಾಂಸ್ಕೃತಿಕ ಕಲೆಯ ಸ್ಥಾನವಾಗಿ ಮಾರ್ಪಡಿಸಿದರೆ ಸಂಸ್ಕೃತಿ ಹಾಗೂ ಪರಂಪರೆ ಎರಡೂ ಏಕಕಾಲದಲ್ಲಿ ಪುನರುಜ್ಜೀವನಗೊಂಡೀತು. ಸಮಾಜದ ಸಹಕಾರದ ನಡುವೆ ಈ ಕೆಲಸವನ್ನು ನಾವು ಮೊದಲು ಮಾಡಬೇಕು.
* ಒಂದು ರಾಗ ಪೂರ್ಣಗೊಳ್ಳುವುದು ಅಥವಾ ಪೂರ್ಣತ್ವ ಪಡೆಯುವುದು ಯಾವಾಗ?
ಒಂದು ರಾಗದ ಗಾಯನ ನಮಗೆ ಆ ರಾಗದ ದರ್ಶನ ನೀಡುವಂತಾದಾರೆ ಪೂರ್ಣತ್ವ ಪಡೆದಂತೆ. ಕಣ್ಣಿನ ಮುಂದೆ ಮೂಡುವುದು ಎಂಬ ಮಾತಿದೆ. ಹಾಗೆಯೇ ರಾಗ ಕಣ್ಣೆದುರು ನಿಂತಂತೆ ಆಗಬೇಕು. ಈ ಮಾತನ್ನು ಶಬ್ದಾರ್ಥ ಮಾಡಬಾರದು. ಭಾವಾರ್ಥ ಮಾತ್ರ ತಿಳಿಯಬೇಕು. ನಮ್ಮೊಳಗೆ ಆ ರಾಗದ ಸಂಚಾರ ದಿವ್ಯಾನುಭವ ನೀಡಬೇಕು. ರಾಗ, ಜೀವಸ್ವರದಿಂದ ಪ್ರಭಾವಿತವಾಗಬೇಕು. ಅದು ರಾಗದ ಪೂರ್ಣತ್ವ. ಮುಂಜಾನೆಗೆ ಮಿಯಾ ಕಿ ತೋಡಿ, ಆಹಿರ್ ಭೈರವ್, ಸಂಜೆಗೆ ಪುರಿಯಾ, ಪೂರ್ವ, ಬಿಹಾಗ್ ನನಗೆ ಅತಿ ಸಮೀಪದ್ದು.
* ನಿಮ್ಮ ತಂದೆಯ ಒಂದು ಒಳ್ಳೆಗುಣ ಮತ್ತು ಕೆಟ್ಟಗುಣ?
ತಂದೆ ಎಲ್ಲರನ್ನೂ ಹೊಗಳುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು. ಇದೇ ಒಳ್ಳೆಯದು ಮತ್ತು ಕೆಟ್ಟದೂ ಸಹ. ಎಲ್ಲರನ್ನೂ ಪ್ರಶಂಸೆ ಮಾಡುವುದು ಅಷ್ಟೊಂದು ಉಚಿತವಲ್ಲ. ಕಾರಣ, ಸರಿಯಿಲ್ಲದ್ದನ್ನೂ ಸರಿಯಿದೆ ಎಂದು ಪ್ರಶಂಸೆ ಮಾಡುವಾಗ ಯಾರದೋ ಉಚಿತವಲ್ಲದ ಗುಣವನ್ನೂ ಹೊಗಳಿದಂತೆ ಅನಿಸುವುದಿಲ್ಲವೇ?
* ಗುರುಕುಲ ಸಂಗೀತ ಪದ್ಧತಿ ಜೀವಂತಗೊಳ್ಳುವುದೆ?
ಜೀವಂತಗೊಳಿಸಬೇಕು. ಕಾರ್ಪೋರೇಟ್ ಸಂಸ್ಥೆಗಳು, ಶ್ರೀಮಂತರು “ಬ್ಯಾಕ್‌ಡ್ರಾಪ್’ ಗಳಾಗಿ ಗುರುಕುಲವನ್ನು ಸ್ಥಾಪಿಸಬೇಕು. ಯಾವುದಕ್ಕೂ ಹಸ್ತಕ್ಷೇಪ ಮಾಡದೇ ಸಂಸ್ಕೃತಿಯನ್ನು ಉಳಿಸುವ-ಬೆಳೆಸುವ ಕಾರ್ಯ ಮಾಡಬೇಕು. ಅದಾದರೆ ಸಾಧ್ಯ.
ಹೀಗೆ ತಮ್ಮ ಅನುಭವಗಳನ್ನು ತೋಡಿಕೊಳ್ಳುವ ರಾಜಶೇಖರ ಮನ್ಸೂರರ ಸೋದರಿಯರ ಪೈಕಿ ನೀಲಾ ಕೊಡ್ಲಿ ಸಂಗೀತ ಪ್ರಪಂಚಕ್ಕೆ ಬರುತ್ತಿರುವವರು. ಜತೆಗೆ ಪ್ರಿಯದರ್ಶಿ ಕುಲಕರ್ಣಿ ಶಿಷ್ಯೆ. ಉಳಿದಂತೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಸಂಗೀತ ಕಲಿಯುವಂತೆ ಒತ್ತಾಯಿಸಿಲ್ಲ. ಹಾಡುತ್ತಿರುವಾಗ ಯಾರಾದರೂ ಒಂದಷ್ಟು ರಿಲೀಫ್ ಎನಿಸಿ “ಹಾಯ್’ ಎಂದೆನಿಸಿದರೆ ಇವರಿಗೂ “ಹಾಯ್’ ಅನಿಸುತ್ತದೆ. ಇದು ರಾಗಕ್ಕೆ ಸಿಕ್ಕ ದರ್ಶನ, ಪರಿಶ್ರಮಕ್ಕೆ ಸಿಕ್ಕ ಫಲ. ಪರಂಪರೆಯ ಅಂತಃಶಕ್ತಿ ಕೂಡ.
( ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ ಲೇಖನ. ನನ್ನ ಸಂಗ್ರಹದಿಂದ ಇದನ್ನು ಇಲ್ಲಿ ಹಾಕಿದ್ದೇನೆ. ಇಲ್ಲಿನ ಬಹಳಷ್ಟು ಅಂಶಗಳು ಚರ್ಚೆಗೀಡಾಗುವಂಥದ್ದು ಮತ್ತು ಬಹಳ ವಿಶೇಷವೆನಿಸುವಂಥದ್ದು. ಅದಕ್ಕೇ ಇಲ್ಲಿ ನೀಡಲಾಗಿದೆ. ಅಭಿಪ್ರಾಯ ತಿಳಿಸಬಹುದು-ಸುಗಂಧ)
9 comments
Comments feed for this article
ಮೇ 28, 2008 at 9:24 ಅಪರಾಹ್ನ
neelanjana
ಸುಗಂಧರೆ,
ಈ ಸಂದರ್ಶನ ನೀಡಿದ್ದಕ್ಕೆ ಧನ್ಯವಾದಗಳು. ರಾಜಶೇಖರ ಮನ್ಸೂರರ ಬಗ್ಗೆ ನಾನು ಕೇಳೇ ಇರಲಿಲ್ಲ. ಇರಲಿ, ಈಗ ಅವರ ಬಗ್ಗೆ ತಿಳಿದದ್ದು ಒಳ್ಳೆಯದಾಯಿತು!
ಇತ್ತೀಚೆಗೆ ಇನ್ನೊಬ್ಬ ಹಿತ್ತಲ ಮದ್ದಾದ ಆರ್.ಎಸ್.ರಮಾಕಾಂತ್ ಅವರನ್ನ ಭೇಟಿಯಾಗಿ, ಮಾತನಾಡೋ ಒಳ್ಳೆಯ ಅವಕಾಶ ದೊರೆತಿತ್ತು ನನಗೆ. ಸಾಧ್ಯವಾದಾಗ ಅದರ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದು ಹಾಕಬೇಕು….
-ನೀಲಾಂಜನ
ಮೇ 30, 2008 at 1:25 ಅಪರಾಹ್ನ
ಶ್ರೀದೇವಿ ಕಳಸದ
ಹೌದು. ಈ ಹಿಂದೆ ವಿಕನಲ್ಲೇ ಸಂದರ್ಶನ ಓದಿದ್ದೆ. ಈಗ ಗಮನಿಸಿರುವ ಅಂಶ ಆಗ ಹೊಳೆದಿರಲಿಲ್ಲ… ಪ್ರಶ್ನೆ ಹಾಗೂ ಅದಕ್ಕೆ ನೀಡಿದ ಉತ್ತರ ಅಷ್ಟೊಂದು ಸಮರ್ಪಕವಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ.
*****
ಶಾಸ್ತ್ರೀಯ ಸಂಗೀತಕ್ಕೆ ಕನ್ನಡದ ಕೃತಿಗಳನ್ನು ಪರಿಚಯಿಸದಿದ್ದರೆ ಕನ್ನಡಕ್ಕೇ ಕೊರತೆ ಅಲ್ಲವೇ?
ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ. ಶಾಸ್ತ್ರೀಯ ಮಟ್ಟುಗಳಿಂದ ಕೂಡಿದ ಶಾಸ್ತ್ರೋಕ್ತ ರಚನೆ(ಬಂದಿಶ್)ಗಳನ್ನು ಉತ್ತರ ಭಾರತದ ಗಾಯಕರೇ ಕಟ್ಟಿಕೊಟ್ಟಿದ್ದಾರೆ. ಅಂತಹ ರಚನೆ ನಮ್ಮಲ್ಲಿ ಇಲ್ಲ. ಸಂಗೀತ ದೃಷ್ಟಿಕೋನಕ್ಕೆ ಹೊಂದುವಂತಿರಬೇಕು. ಅಂತಹ ರಚನೆಗಳೂ ಕನ್ನಡದಲ್ಲೂ ಸಿಕ್ಕರೆ ನಾನು ಖಂಡಿತಾ ಹಾಡುತ್ತೇನೆ. ಕವಿ ಹೃದಯಿಗಳು ಸಂಗೀತದ ಅಗತ್ಯವನ್ನೂ ಅರಿತು ರಚಿಸಿದರೆ ಅತ್ಯಂತ ಸೂಕ್ತ. ಅಂತಹವು ರಚನೆಯಾದರೆ ಮೊದಲು ಖುಷಿ ಪಡುವವನೇ ನಾನು.
***
ಆಯಾ ಮಣ್ಣಿಗೆ ಅದರದೇ ಆದ ಸುವಾಸನೆ ಇರುತ್ತದೆ. ಜೊತೆಗೆ ಎಳೆ, ಎಳೆತ ಎಲ್ಲವೂ ಹಾಗಂತ ಒಂದನ್ನೊಂದು ಹೋಲಿಸಿ ನೋಡುವುದು ಅಷ್ಟೊಂದು ಸಮಂಜಸವಲ್ಲ. ವ್ಯಕ್ತಿಯೊಬ್ಬನಲ್ಲಿ ಕಾವ್ಯಪ್ರತಿಭೆ, ಹಾಗೂ ಸಂಗೀತ ಪ್ರತಿಭೆ ಒಟ್ಟಿಗೆ ಮೇಳೈಸಿದಾಗ ಪ್ರಯೋಗಶೀಲತೆ ತಾನೇ ತಾನಾಗಿ ಹೊರಹೊಮ್ಮುತ್ತದೆ. ಕಾವ್ಯದ ಸೌಂದರ್ಯಕ್ಕೆ ರಾಗ-ರಸ ಸೇರಿಸಿ ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸುವುದು ಅವನದೇ ಜವಾಬ್ದಾರಿ. ಯಾಕೆಂದರೆ ಅವನೊಳಗಿನ ಕಲ್ಪನೆ, ಭಾವಸೃಷ್ಟಿಗೆ ಪುಷ್ಠಿ ನೀಡುವುದು ಪರಿಪೂರ್ಣವಾಗಿ ಅವನಿಗೆ ತಾನೇ ಅಂತರ್ಗತವಾಗಬೇಕಿರುವುದು? ಹಾಗಾದಾಗ ಅದೊಂದು ಗಟ್ಟಿ ಪರಂಪರೆಗೆ ನಾಂದಿಯಾದಂತಾಗುತ್ತದೆ.
ಸುಗಮ ಸಂಗೀತದ ಚೌಕಟ್ಟಿನೊಳಗೆ ಕನ್ನಡದ ಭಾವಗೀತೆ-ಭಕ್ತಿಗೀತೆಗಳು ಈಗಾಗಲೇ ಬೆಳೆಯುತ್ತಿವೆ ಬೆಳೆದು ತನ್ನದೇ ಆದ ಪರಂಪರೆ ಹುಟ್ಟುಹಾಕಿವೆ. ದೇವರನಾಮ-ಕೀರ್ತನೆಗಳು (ಬಹುಪಾಲು)ಹಾಕಿಕೊಟ್ಟ ಸಂಪ್ರದಾಯದಲ್ಲೇ ಮುಂದುವರೆಯುತ್ತಿವೆ. ಹಾಗೆಯೇ ಹಿಂದೂಸ್ತಾನಿ ಸಂಗೀತವೂ ಹಿರಿಯರು ಹಾಕಿಟ್ಟ ಬಂದಿಷ್ನಲ್ಲೇ ಬಂಧಿಯಾಗಿ ಆಲಾಪಿಸುತ್ತಿದೆ. ಇದರಿಂದ ಕನ್ನಡಕ್ಕೆ ಹೇಗೆ ಕೊರತೆಯಾಗುತ್ತದೆ? ಹಾಗೊಂದು ವೇಳೆ ಹಿಂದೂಸ್ತಾನಿ ಸಂಗೀತದಿಂದ ಕನ್ನಡ ಶ್ರೀಮಂತವಾಗಬೇಕೆಂದೇ ಇದ್ದಲ್ಲಿ ಕನ್ನಡದಲ್ಲೂ ಸಾರಂಗದೇವ, ತಾನಸೇನರಂಥ ಪ್ರತಿಭೆಗಳು ಹೊಮ್ಮಲಿ….
ಮೇ 31, 2008 at 2:15 ಅಪರಾಹ್ನ
Ravee...
Registration- Seminar on the occasion of kannadasaahithya.com 8th year Celebration
Dear Sugandha,
On the occasion of 8th year celebration of Kannada saahithya.
com we are arranging one day seminar at Christ college.
As seats are limited interested participants are requested to
register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
-kannadasaahithya.com balaga
ಜೂನ್ 4, 2008 at 7:56 ಅಪರಾಹ್ನ
neelanjana
ಶ್ರೀದೇವಿ ಅವರ ಪ್ರತಿಕ್ರಿಯೆಯನ್ನು ಓದಿದ ನಂತರ ಇನ್ನೊಂದೆರಡು ಮಾತುಗಳನ್ನು ಬರೆಯಬೇಕೆನಿಸಿತು.
“ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ.”
ನನ್ನನ್ನು ಕೇಳಿದರೆ ಈ ಮಾತಿನಲ್ಲಿ ಹೆಚ್ಚಿಗೆ ಹುರುಳಿಲ್ಲ – ಹಾಗೆ ನೋಡಿದರೆ, ಹಿಂದೂಸ್ತಾನಿ(ಖ್ಯಾಲ್) ಗಾಯನದಲ್ಲಿ ಸಾಹಿತ್ಯದ ಅಂಶ ಬಹಳ ಕಡಿಮೆ. ವಿಲಂಬಿತ ಒಂದು ಸಾಲು ಇದ್ದರೆ, ಒಂದು ಸಾಲು ದುರಿತ ಅನ್ನುವಷ್ಟರಲ್ಲಿ ಮುಗಿಯುತ್ತೆ. ಅದೂ ಅಲ್ಲದೆ, ಅದರಲ್ಲಿ ಅಂತಹ ಕವಿತೆಯ ಅಂಶಗಳೂ ಕಾಣುವುದಿಲ್ಲ. ಅಂತಹದರಲ್ಲಿ, ಏರೀ ಆಲೀ ಪಿಯಾ ಬಿನ ಸಖಿ ಎಂದು ಹಾಡುವಲ್ಲಿ, ಅಥವಾ ಕನ್ನಡದಲ್ಲಿ “ಅಳಿಸಂಕುಲವೇ ಮಾಮರವೇ ಕೋಗಿಲೆಯೇ ಬೆಳದಿಂಗಳೇ” ಎಂದು ಹಾಡುವಲ್ಲಿಯೂ ಹೆಚ್ಚಿಗೆ ಬದಲಾವಣೆ ಇರಕೂಡದು. ಈ ಮಾತನ್ನು ನಾನು ಹಿಂದೂಸ್ತಾನಿಯಲ್ಲಿ ಸಾಹಿತ್ಯದ ಅಂಶಗಳು ಗೌಣ ಎಂದು ಎತ್ತಿ ಹೇಳುವುದಕ್ಕಷ್ಟೇ ಹೇಳುತ್ತಿರುವೆ.
ಕರ್ನಾಟಕ ಸಂಗೀತದ ಕೃತಿಗಳಲ್ಲಿ ಸಾಹಿತ್ಯದ ಅಂಶ ಹೆಚ್ಚು – ಆದರೆ, ಅಲ್ಲಿಯೂ ಮನೋಧರ್ಮ ಪ್ರಧಾನವಾದ ಪಲ್ಲವಿ ಗಾಯನದಲ್ಲಿ ಭಾಷೆ ತೀರಾ ಗೌಣ. ಒಂದು ಸಾಲು ಸಾಹಿತ್ಯವಿರುವ ಪಲ್ಲವಿಯನ್ನು ಸಂಸ್ಕೃತ ತೆಲುಗಿನಲ್ಲಿ ಎಷ್ಟು ಚೆನ್ನಾಗಿ ಮಾಡಬಹುದೋ ಹಾಡಬಹುದೋ, ಅಷ್ಟೇ ಚೆನ್ನಾಗಿ ತಮಿಳು – ಕನ್ನಡ ಅಥವ ಹಿಂದಿ , ಯಾವ ಭಾಷೆಯಲ್ಲಿ ಕೂಡ ಮಾಡಬಹುದು.
ಜೂನ್ 5, 2008 at 1:18 ಅಪರಾಹ್ನ
ಶ್ರೀದೇವಿ ಕಳಸದ
ನೀಲಾಂಜನರ ಪ್ರತಿಕ್ರಿಯೆಗೆ ಉತ್ತರಿಸುತ್ತಾ….
‘ಹಿಂದೂಸ್ತಾನಿ ಸಂಗೀತಕ್ಕೆ ಎಳೆ ಬೇಕು. ಅಂತಹ ಕಾವ್ಯದ ಎಳೆ ಕನ್ನಡದಲ್ಲಿ ಅಷ್ಟಿಲ್ಲ’
ರಾಜಶೇಖರ ಮನ್ಸೂರರ ಅಭಿಪ್ರಾಯದಲ್ಲಿ ಹುರುಳಿಲ್ಲ ಎನ್ನುವುದಕ್ಕೇ ಅಷ್ಟೆಲ್ಲ ಹೇಳಬೇಕಾಯಿತು. ಆದರೆ ಹೆಸರಾಂತ ಕಲಾವಿದರು ಈ ರೀತಿ ಅಭಿಪ್ರಾಯಿಸುವುದು ಎಷ್ಟು ಸಮಂಜಸ? ಅದು ಏನನ್ನು ಸೂಚಿಸುತ್ತದೆ?
ಹಿಂದೂಸ್ತಾನಿ ಸಂಗೀತ ಸಾಹಿತ್ಯ ಪ್ರಧಾನವಲ್ಲ ಎನ್ನುವುದು ಅಂದಿನಿಂದ ಇಂದಿನವರೆಗೂ ಪ್ರಸ್ತುತ. ಆದ್ರೆ ಸಂದರ್ಶಕರ ಪ್ರಶ್ನೆ ಹಾಗೂ ಅದಕ್ಕೆ ಪೂರಕವಾದ ಉತ್ತರಕ್ಕೆ ಪ್ರತಿಯಾಗಿ ನಾನು ಹಾಗೆ ಹೇಳಬೇಕಾಯಿತು.
ನೀವು ಉದಾಹರಿಸಿದಂತೆ, (‘ಅಳಿಸಂಕುಲವೇ ಮಾಮರವೇ…..’ ಯೊಂದಿಗೆ) ಇನ್ನೊಂದಿಷ್ಟು ಹೊಸ ಆಲೋಚನೆಯೊಂದಿಗೆ ಪ್ರಯೋಗ ಮಾಡಬಹುದಲ್ಲ? ಜನ ಸ್ವೀಕರಿಸುತ್ತಾ ಹೋದಲ್ಲಿ ಮತ್ತೊಂದು ಪರಂಪರೆ ಹುಟ್ಟುಹಾಕಬಹುದಲ್ಲಾ? ಈ ವಿಷಯವಾಗಿ ಧಾರವಾಡದಲ್ಲಿ ಕನ್ನಡದ ಭಾವಗೀತೆಗಳನ್ನ ಖ್ಯಾಲಗಾಯನಕ್ಕೆ ಅಳವಡಿಸಿ ಹಾಡಲು ಕೆಲ ಕಲಾವಿದರು ಪ್ರಯೋಗ ನಡೆಸಿದ್ರು. ಆದರೆ ಅದು ಪ್ರಯೋಗಕ್ಕೆ ಸೀಮಿತವಾಯ್ತು…
ಜೂನ್ 8, 2008 at 1:26 ಅಪರಾಹ್ನ
kedagebana
ಶ್ರೀದೇವಿ ಮತ್ತು ನೀಲಾಂಜನರಿಗೆ ಧನ್ಯವಾದ. ಒಳ್ಳೆಯ ಚರ್ಚೆಯಾಗುವಂಥ ಅಂಶವಿದು. ನಾನು ಸ್ವಲ್ಪ ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ಇತ್ತ ಗಮನಹರಿಸಿರಲಿಲ್ಲ.
ನಮ್ಮಲ್ಲೂ ಅಂಥ ಎಳೆ ಇಲ್ಲ ಎಂದು ಹೇಳುವುದರಲ್ಲಿ ಹುರುಳಿಲ್ಲ. ನಿಜ, ಸಂಗೀತದಲ್ಲಿ, ಅದರಲ್ಲೂ ಹಿಂದೂಸ್ತಾನಿ ಸಂಗೀತದಲ್ಲಿ ಸಾಹಿತ್ಯ ಪ್ರಧಾನವಲ್ಲ. ಹಾಗೆಯೇ ಪ್ರಯೋಗಗಳು ನಡೆಯದ ಯಾವುದೇ ಸಂಸ್ಕೃತಿ ನಿಂತ ನೀರಾಗುವ ಆತಂಕ ಇದ್ದೇ ಇರುತ್ತೆ. ಜತೆಗೆ ಯಾವುದೇ ಪ್ರಯೋಗ ಜನಪ್ರಿಯತೆಯ ಮೆಟ್ಟಿಲು ಮುಟ್ಟಿದಾಗ ಸಮಾಜ ಅದನ್ನು ಸ್ವೀಕರಿಸುವ ಮಟ್ಟಕ್ಕೆ ಬಂದಿರುತ್ತದೆ. ಹಾಗಾಗಿ ಪ್ರಯೋಗಗಳನ್ನು ಜನಪ್ರಿಯಗೊಳಿಸುವ ಕೆಲಸವಾಗಬೇಕು.
ದ. ರಾ. ಬೇಂದ್ರೆ ಸಹ ಇಂಥದೊಂದು (ಹಿಂದೂಸ್ತಾನಿ ಸಂಗೀತಕ್ಕೆ ಹೊಂದುವಂಥ) ರಚನೆಗಳನ್ನು ಮಾಡಲು ಪ್ರಯತ್ನಿಸಿದರು. ಆದರೆ ಅದಕ್ಕೆ ಬಹಳ ದೊಡ್ಡ ಸಹಕಾರ ಸಿಗಲಿಲ್ಲ ಎಂಬುದು ನನಗೆ ದೊರೆತ ಮಾಹಿತಿ. ಸಹಕಾರ ಎಂದರೆ ಸಂಗೀತಪ್ರಿಯರಿಂದ, ಸ್ವಲ್ಪಮಟ್ಟಿಗೆ ಸಂಗೀತಗಾರರಿಂದಲೂ ಸಹ.
ಸಂಗೀತ ಯಾವಾಗಲೂ ರಾಗ-ಭಾವ, ಮನೋಧರ್ಮ ಪ್ರಧಾನವೆಂಬುದು ಸರಿ. ಅದಕ್ಕೆ ನಮ್ಮ ಮಣ್ಣಿನ ಕಂಪನ್ನೂ ಹೊಂದಿಸುವ ಕೆಲಸವಾಗಬೇಕೆಂಬುದು ಕಾಳಜಿಯಲ್ಲವೇ ಎಂಬುದು ಚರ್ಚೆಯಾಗಬೇಕಾದ ಪ್ರಶ್ನೆ.
ಧನ್ಯವಾದಗಳೊಂದಿಗೆ
ಸುಗಂಧ
ಜೂನ್ 9, 2008 at 1:21 ಅಪರಾಹ್ನ
ಶ್ರೀದೇವಿ ಕಳಸದ
ಸುಗಂಧರೆ,
ಅಂದರೆ ಭಾಷೆ ಹಾಗೂ ಸಾಹಿತ್ಯದ ವಿಷಯವಾಗಿ ನೀವು ಮಾತನಾಡ್ತಿರೋದಲ್ವೇ…?
ಜೂನ್ 16, 2008 at 7:23 ಅಪರಾಹ್ನ
ಶ್ರೀ
ಒಳ್ಳೇ ಸಂದರ್ಶನ. ಪ್ರಶ್ನೆಗಳು ತುಂಬಾ ಚೆನ್ನಾಗಿವೆ. ಸಾಹಿತ್ಯ-ಸಂಗೀತದ ಬಗ್ಗೆ ನಡೀತಿರೋ ಚರ್ಚೆಗೆ ನನ್ನದೊಂದೆರಡು ಸಾಲು. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯದ ಪಾತ್ರ ಎಷ್ಟು ಅನ್ನ್ನೋದು ದೊಡ್ಡ ಪ್ರಶ್ನೆ. ಸಂಗೀತದ ಆಳ ಹೆಚ್ಚುತ್ತಿದ್ದ ಹಾಗೇ ಸಾಹಿತ್ಯ ಗೌಣವಾಗ್ತಾ ಹೋಗುತ್ತೆ ಅಂತ ನನಗನ್ನಿಸುತ್ತೆ. ಅಳಿಸಂಕುಲವೋ ಪಿಯಾ ಬಿನ್ ಸಖೀಯೋ ಮೀನಾಕ್ಷಿ ಮೇಮುದಂಮೋ ನಿನ್ನ ನೋಡಿ ಧನ್ಯನಾದೆನುನೋ ಅಥ್ವಾ ಮತ್ತೊಂದೋ, ಒಂದು ಶಾಸ್ತ್ರೀಯ ಕಚೇರಿಯಲ್ಲಿ ಕುಳಿತಾಗ ನಾವು ಕೇಳೋದು ಸಂಗೀತವನ್ನಷ್ಟೆ ಅಲ್ವಾ? ಕೊನೆಯಲ್ಲಿ ಹಾಡೋ ತುಕ್ಕಡಾಗಳು ಇದಕ್ಕೆ ಅಪವಾದ. ಅದು ಬಿಟ್ರೆ, ಯಾವ್ ದೇವರನ್ನ/ ಯಾವ ಸಖಿಯನ್ನ ಯಾವ್ ಭಾಷೆಯಲ್ಲಿ ಯಾರು ಕರೀತಿದಾರೆ ಅನ್ನೋದೆಲ್ಲಾ ಎಷ್ಟು ಮುಖ್ಯ? ಅಥ್ವಾ ಹಾಡೋವ್ರಾದ್ರೂ ಆ ಸಾಹಿತ್ಯದ ಜೊತೆ ಎಷ್ಟು ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುತಾರೆ? ಆ ತೊಡಗಿಕೊಳ್ಳುವಿಕೆ ಶಾಸ್ತ್ರೀಯ ಸಂಗೀತರಂಪರೆಯಲ್ಲೇ ಅತಿ ಕಮ್ಮಿ ಕಾಣುವಾಗ ಕನ್ನಡದ ಎರಡು ಸಾಲು ಸೇರಿಸೋದ್ರಿಂದ ಕನ್ನಡ ಆಸ್ವಾದಿಸೋವ್ರಿಗಾಗ್ಲೀ ಸಂಗೀತ ಆಸ್ವಾದಿಸೋವ್ರಿಗಾಗ್ಲೀ ಎಷ್ಟು ಮಟ್ಟಿಗೆ ಆ ಅಸ್ವಾದದ ರುಚಿ ಹೆಚ್ಚಿಸುತ್ತೆ? ಹೇಗೆ ಹೆಚ್ಚಿಸುತ್ತೆ? ಮಣ್ಣಿನ ಕಂಪನ್ನು ಹೊಂದಿಸೋದರ ಬಗ್ಗೆ ಬರಿಯೋಕೆ ಇನ್ನೊಂದು ಬ್ಲಾಗ್ ಪೋಸ್ಟ್ ಬೇಕೇನೋ…ನೋಡೋಣ, ಸದ್ಯದಲ್ಲೇ ಬರೀತೀನಿ!:)
ಜೂನ್ 21, 2008 at 7:25 ಫೂರ್ವಾಹ್ನ
ಶ್ರೀದೇವಿ ಕಳಸದ
ಶ್ರೀಯವರೇ,
ನಿಮ್ಮ ರಾಗಕ್ಕೆ ನನ್ನದೂ ಒಂದು ತಾನ್…
ಖಂಡಿತ ಮ್ಯೂಸಿಕ್ ಈಸ್ ಯುನಿವರ್ಸ್ಲ್ ಆರ್ಟ್
ತುಕಡಾ ಮುರ್ಕಿಗಳೆಲ್ಲ ಬೇಕಾಗೇ ಇಲ್ಲ.. ನಿಜವಾದ ಸಂಗೀತ ಆಸ್ವಾದನೆಗೆ.
ಹಾಗಂತ ಅವುಗಳನ್ನು ಗಣನೆಗೆ ತೆಗೆದುಕೊಳ್ಳಲಾರದೆ ಇರಲಾಗದು. ಕಲಾವಿದನ ಕೌಶಲ್ಯದ ಒಂದು ಭಾಗ ಅದು.
ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಯಬೇಕಾದಲ್ಲಿ ಅದು ನಮ್ಮ ಹೃದಯಕ್ಕೆ ನಿಲುಕಿದಾಗ ಮಾತ್ರ. ಹಾಗೆ ನಿಲುಕಲು ಅದರ ಗಾಳಿ, ಪರಿಮಳ ನಮ್ಮನ್ನು ಸುತ್ತುತ್ತಲೇ ಇರಬೇಕು. ಅಥವಾ ಅದರ ಎಳೆಯೊಂದು ಸಿಕ್ಕರೂ ಸರಿ.
ಪ್ರಸ್ತುತ ಕಲಬೆರಕೆ ಪರಿಸರದಲ್ಲಿ ಅಪ್ಪಟ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವ ಮನಸ್ಸುಗಳೆಲ್ಲಿವೆ ಹೇಳಿ? ಅಮ್ಮನ ಕೈತುತ್ತಿಗಿಂತ ಸ್ಪೂನಿನಿಂದ ತಿನ್ನುವ ಖಾದ್ಯಗಳೇ ಹೆಚ್ಚು ರುಚಿ ಎಂಬುದು ಅನಿವಾರ್ಯ ಅಂತಾದಾಗ ಆ ಸ್ಪೂನಿನಲ್ಲಿಯೇ ಪೌಷ್ಠಿಕವಾದ, ಪರಂಪರಾಗತ ಖಾದ್ಯಗಳನ್ನ ಸೇರಿಸಿ ಕೊಡೋಣ. ದಿನಕಳೆದಂತೆ, ‘ನಿಜ’ ಖಾದ್ಯ ರುಚಿಸೀತು… ಆಗ ಈ ತುಕಡಾ, ಮುಕಡಾ, ಖಟ್ಕಿ ಗಳೆಲ್ಲ ಇಷ್ಟವಾಗತೊಡಗುತ್ತವೆ. ಕ್ರಮೇಣ ತಾಳ, ಲಯ, ಸ್ವರ, ಆಕಾರ, ಈಕಾರ, ಹ್ರೀಂಕಾರ ಕೊನೆಗೊಂದು ದಿನ ಓಂಕಾರ…..